ಕೊಪ್ಪಳ : ಆಂಜನೇಯ ಸ್ವಾಮಿಯ ಜನ್ಮಸ್ಥಳ ಎಂದೇ ಪ್ರಸಿದ್ಧಿಯಾಗಿರುವ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಅಂಜನಾದ್ರಿ ದೇಗುಲವನ್ನು ಧಾರ್ಮಿಕ ದತ್ತಿ (ಮುಜರಾಯಿ) ಕಾಯ್ದೆಯಡಿ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಕೃತ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ ಮಹತ್ವದ ಆದೇಶ ನೀಡಿದೆ.
ಅರ್ಚಕರಿಗೆ ಹಾಗೂ ಸಂಬಂಧಪಟ್ಟ ವ್ಯಕ್ತಿಗಳಿಗೆ ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ಹಾಗೂ ಅವರ ವಾದ ಆಲಿಸದೆ ಏಕಪಕ್ಷೀಯವಾಗಿ ಕ್ರಮ ಕೈಗೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
2018ರ ಸರ್ಕಾರದ ಆದೇಶ ಹಾಗೂ ಆಡಳಿತಾಧಿಕಾರಿ ನೇಮಕ ರದ್ದು:
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಸರ್ಕಾರದ ಹಳೆಯ ಆದೇಶಗಳನ್ನು ಸಂಪೂರ್ಣವಾಗಿ ವಜಾಗೊಳಿಸಿದೆ. 2018 ರ ಸೆಪ್ಟೆಂಬರ್ 24 ರಂದು ಅಂಜನಾದ್ರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯಡಿ ‘ಅಧಿಸೂಚಿತ ಸಂಸ್ಥೆ’ಯಾಗಿ ಸೇರಿಸಿ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಅದೇ ವರ್ಷದ ಡಿಸೆಂಬರ್ 15 ರಂದು ದೇಗುಲಕ್ಕೆ ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯನ್ನು (EO) ನೇಮಿಸಿ ಹೊರಡಿಸಿದ್ದ ಸರ್ಕಾರದ ಆದೇಶವೂ ರದ್ದಾಗಿದೆ.
ದೇಗುಲವನ್ನು ಸರ್ಕಾರದ ಸುಪರ್ದಿಗೆ ಪಡೆಯುವ ಮುನ್ನ ಸಂಬಂಧಪಟ್ಟವರಿಗೆ ಸೂಕ್ತ ನೋಟಿಸ್ ನೀಡಿ, ಅವರ ಅಭಿಪ್ರಾಯ ಆಲಿಸದಿರುವುದು “ನೈಸರ್ಗಿಕ ನ್ಯಾಯದ ತತ್ವಕ್ಕೆ” (Principles of Natural Justice) ಸಂಪೂರ್ಣ ವಿರುದ್ಧವಾಗಿದೆ ಎಂದು ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ಹಿಂದಿನ ಆದೇಶಗಳನ್ವಯ ದೇವಾಲಯದಲ್ಲಿ ಅರ್ಚಕ ವಿದ್ಯಾದಾಸಬಾಬಾ ಅವರಿಗೆ ಧಾರ್ಮಿಕ ಪೂಜಾ ಕೈಂಕರ್ಯ ಹಾಗೂ ಅರ್ಚಕ ಕರ್ತವ್ಯಗಳನ್ನು ನೆರವೇರಿಸಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರದ ನಿರ್ಧಾರ: ವೋಟ್‌ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಆಕ್ರೋಶ
ಆದರೆ, ಈ ತೀರ್ಪಿನಿಂದಾಗಿ ದೇವಸ್ಥಾನದ ಮೇಲೆ ಸರ್ಕಾರಕ್ಕೆ ಯಾವುದೇ ಶಾಶ್ವತ ಹಕ್ಕಿಲ್ಲ ಎಂದು ಭಾವಿಸಬಾರದು. ಅಗತ್ಯಬಿದ್ದಲ್ಲಿ ರಾಜ್ಯ ಸರ್ಕಾರವು ಕಾನೂನು ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿಯಮಾನುಸಾರ ಹೊಸದಾಗಿ ನೋಟಿಸ್ ನೀಡಿ ಅಧಿಸೂಚನೆ ಹೊರಡಿಸಲು ಕಾನೂನುಬದ್ಧ ಅವಕಾಶ ಮುಕ್ತವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಮುಜರಾಯಿ ವ್ಯಾಪ್ತಿಯಲ್ಲೇ ಇದೆ ಎಂದ ಕೊಪ್ಪಳ ಡಿಸಿ:
ಇನ್ನೊಂದೆಡೆ, ಹೈಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳ ಜಿಲ್ಲಾಧಿಕಾರಿ (DC), ಅರ್ಚಕ ಬಾಬಾ ಅವರಿಗೆ ಪೂಜೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ದೇವಸ್ಥಾನವು ಇಂದಿಗೂ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿಯೇ ಮುಂದುವರಿಯಲಿದೆ ಹಾಗೂ ಹೈಕೋರ್ಟ್ ಸೂಚನೆಯಂತೆ ಸರ್ಕಾರ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿನಲ್ಲಿ, ರಾಜ್ಯ ಸರ್ಕಾರದ ಹಳೆಯ ಆದೇಶ ರದ್ದಾಗಿದ್ದರೂ ಸಹ, ಅಂಜನಾದ್ರಿ ಬೆಟ್ಟದ ಆಡಳಿತ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಹಾಗೂ ಭಕ್ತಾದಿಗಳಲ್ಲಿ ಮತ್ತೆ ಕಾವು ಪಡೆದುಕೊಂಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

