ಬೆಂಗಳೂರು: ಕರ್ನಾಟಕದಲ್ಲಿ ಹಾಲಿನ ದರ ಲೀಟರ್ಗೆ 8 ರೂ. ಹೆಚ್ಚಳವಾದ ಬೆನ್ನಲ್ಲೇ ಹೋಟೆಲ್ಗಳಲ್ಲಿ ಕಾಫಿ, ಟೀ ಹಾಗೂ ವಿವಿಧ ತಿಂಡಿಗಳ ಬೆಲೆ ಏರಿಕೆಗೆ ಚಿಂತನೆ ನಡೆಸಲಾಗುತ್ತಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.
ಹಾಲಿಗೆ 2-3ರೂ. ಏರಿಕೆ ಮಾಡುತ್ತಿದ್ದರೂ ಹೊಟೇಲುಗಳಲ್ಲಿ ಬೆಲೆ ಏರಿಸುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ 8ರೂ.ಗಳಷ್ಟು ಏರಿಕೆಯಾಗುತ್ತಿರುವುದರಿಂದ ಹೊಟೇಲುಗಳಲ್ಲಿ ಹಾಲಿನಿಂದ ಮಾಡುವ ಚಹಾ ಕಾಫಿ, ಆಹಾರ ಮತ್ತು ಪಾನೀಯಗಳ ಬೆಲೆ ಹೆಚ್ವಿಸುವುದು ಅನಿವಾರ್ಯ ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘ ತಿಳಿಸಿದೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಭಾರಿ ಬೆಲೆ ಏರಿಕೆ ಶಾಕ್: ಹಾಲಿನ ದರ ಲೀಟರ್ಗೆ ₹8 ಹೆಚ್ಚಳ!; ನವೆಂಬರ್ 1ರಿಂದ ಹೊಸ ದರ ಜಾರಿ
ಹಾಲು ದೈನಂದಿನ ಬಳಕೆಯ ಪ್ರಮುಖ ಆಹಾರ ಪದಾರ್ಥವಾಗಿದ್ದು, ಹೋಟೆಲ್ಗಳಲ್ಲಿ ಕಾಫಿ, ಟೀ ಸೇರಿದಂತೆ ಹಲವು ಪಾನೀಯಗಳ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ಸಾಮಾನ್ಯ ಜನರಿಗೆ ಹಾಲಿನ ದರ ಹೆಚ್ಚಳ ಮತ್ತು ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ. ಪ್ರತಿದಿನ ಬೆಳಗಿನ ಉಪಾಹಾರಕ್ಕಾಗಿ ಹೋಟೆಲ್ಗಳನ್ನು ಅವಲಂಬಿಸಿರುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ.

