ನಾಡಿನಾದ್ಯಂತ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: ಮನೆಮನಗಳಲ್ಲಿ ಕನ್ನಡಿಗರ ಸ್ವಾಭಿಮಾನದ ಹಬ್ಬ

ಬೆಂಗಳೂರು: ನಾಡಿನಾದ್ಯಂತ ಇಂದು 71ನೇ ಕನ್ನಡ ರಾಜ್ಯೋತ್ಸವದ (Kannada Rajyotsava) ಸಡಗರ-ಸಂಭ್ರಮ ಮುಗಿಲುಮುಟ್ಟಿದೆ. ನವೆಂಬರ್ 1ರ ಈ ಐತಿಹಾಸಿಕ ದಿನದಂದು ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡಿಗರು ಹಳದಿ ಮತ್ತು ಕೆಂಪು ವರ್ಣದ ಕನ್ನಡ ಧ್ವಜವನ್ನು ಎತ್ತರಕ್ಕೆ ಹಾರಿಸಿ, ನಾಡದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ರಾಜಧಾನಿ ಬೆಂಗಳೂರು, ಕರಾವಳಿಯ ಮಂಗಳೂರು, ಉಡುಪಿ, ಸಾಂಸ್ಕೃತಿಕ ನಗರಿ ಮೈಸೂರು, ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ರಾಜ್ಯೋತ್ಸವದ ಕಳೆ ಗರಿಗೆದರಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧರಾಮಯ್ಯ ಅವರಿಂದ ಧ್ವಜಾರೋಹಣ:

ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರಮುಖ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿ, ನಾಡದೇವಿಗೆ ಪುಷ್ಪನಮನ ಸಲ್ಲಿಸಿದರು.

ಸ್ಕೂಲ್ ಮಕ್ಕಳ ಸಾಂಸ್ಕೃತಿಕ ಮೆರಗು: ಕಂಠೀರವ ಕ್ರೀಡಾಂಗಣದಲ್ಲಿ ಸಾವಿರಾರು ಶಾಲಾ ಮಕ್ಕಳು ನಡೆಸಿಕೊಟ್ಟ ನಾಡಗೀತೆ, ಡೊಳ್ಳು ಕುಣಿತ, ಕಂಸಾಳೆ, ನಂದಿಕೋಲು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿದವು.

ಸಿಎಂ ಸಂದೇಶ: “ಕನ್ನಡವು ಕೇವಲ ಭಾಷೆಯಲ್ಲ, ಅದು ನಮ್ಮ ಜೀವನ ವಿಧಾನ ಮತ್ತು ಸಂಸ್ಕೃತಿ. ಪ್ರತಿಯೊಬ್ಬ ಕನ್ನಡಿಗನೂ ತನ್ನ ದೈನಂದಿನ ಜೀವನದಲ್ಲಿ ಕನ್ನಡವನ್ನು ಬಳಸುವ ಮತ್ತು ಬೆಳೆಸುವ ಶಪಥ ಮಾಡಬೇಕು,” ಎಂದು ಮುಖ್ಯಮಂತ್ರಿಗಳು ತಮ್ಮ ರಾಜ್ಯೋತ್ಸವ ಭಾಷಣದಲ್ಲಿ ಕರೆ ನೀಡಿದರು.

ಇದನ್ನೂ ಓದಿ: 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 71 ಸಾಧಕರಿಗೆ ಒಲಿದ ಅತ್ಯುನ್ನತ ಪುರಸ್ಕಾರ

ರವೀಂದ್ರ ಕಲಾಕ್ಷೇತ್ರದಲ್ಲಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:

ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವೈಭವೋಪೇತ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 71 ಮಂದಿ ಸಾಧಕರಿಗೆ ಮತ್ತು ಸಂಸ್ಥೆಗಳಿಗೆ 71ನೇ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ಸಮಾಜ ಸೇವಕರು ಹಾಗೂ ಕರಾವಳಿ ಸೇರಿದಂತೆ ವಿವಿಧ ಭಾಗಗಳ ಸಾಧಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಕನ್ನಡಿಗರ ರ‍್ಯಾಲಿ:

ಕರಾವಳಿಯಾದ್ಯಂತ ಕನ್ನಡ ಚಳವಳಿ ಒಕ್ಕೂಟಗಳು, ಶಾಲಾ-ಕಾಲೇಜುಗಳು ಹಾಗೂ ಆಟೋ ಚಾಲಕರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ವಾಹನ ರ‍್ಯಾಲಿಗಳನ್ನು ಆಯೋಜಿಸಲಾಗಿತ್ತು. ಧ್ವನಿವರ್ಧಕಗಳಲ್ಲಿ ಕನ್ನಡದ ಗೀತೆಗಳು ಮೊಳಗಿದವು. ಗಡಿನಾಡು ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾರಿ ಜನಸ್ತೋಮದೊಂದಿಗೆ ಬೃಹತ್ ಕನ್ನಡ ಶೋಭಾಯಾತ್ರೆ ನಡೆಯುತ್ತಿದ್ದು, ಸಾವಿರಾರು ಜನರು ಹಳದಿ-ಕೆಂಪು ಪೇಟ ತೊಟ್ಟು ಭಾಗವಹಿಸಿದ್ದಾರೆ. ನಗರದ ಪ್ರತಿಯೊಂದು ಆಟೋ ಸ್ಟ್ಯಾಂಡ್‌ಗಳು, ಬಸ್ ರಸ್ತೆಗಳು, ಸಾಫ್ಟ್‌ವೇರ್ ಕಂಪನಿಗಳು ಹಾಗೂ ವ್ಯಾಪಾರ ಮಳಿಗೆಗಳನ್ನು ತೋರಣಗಳಿಂದ ಸಿಂಗರಿಸಿ ಕನ್ನಡಿಗರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ