“ನಟನೆಗಿಂತ ನಿಲುವುಗಳೇ ನನ್ನ ಸಂಪಾದನೆ”: ಪ್ರಕಾಶ್ ರಾಜ್‌ಗೆ ಮುಸ್ಲಿಂ ಒಕ್ಕೂಟದಿಂದ ‘ಮಾನವ ರತ್ನ’ ಪ್ರಶಸ್ತಿ

ಉಡುಪಿ: ಖ್ಯಾತ ಬಹುಭಾಷಾ ನಟ ಹಾಗೂ ಚಿಂತಕ ಪ್ರಕಾಶ್ ರಾಜ್ (ಪ್ರಕಾಶ್ ರೈ) ಅವರಿಗೆ ಉಡುಪಿಯಲ್ಲಿ ಮುಸ್ಲಿಂ ಒಕ್ಕೂಟದ ವತಿಯಿಂದ ‘ಮಾನವ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮಗೆ ಸಿಕ್ಕ ಪ್ರಶಸ್ತಿಯ ಸಂಪೂರ್ಣ ನಗದು ಬಹುಮಾನವನ್ನು ಅವರು ಎಸ್‌ಐಆರ್ (SIR) ಹೋರಾಟದ ಒಕ್ಕೂಟಕ್ಕೆ ಹಸ್ತಾಂತರಿಸುವ ಮೂಲಕ ಗಮನ ಸೆಳೆದಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ಅವರು, “ಶ್ರೀಮಂತರು ಯೋಚನೆ ಮಾಡಿ ಹೋರಾಟದ ಒಕ್ಕೂಟಗಳಿಗೆ ಸಹಾಯ ಮಾಡಿ, ಇಲ್ಲವಾದರೆ ವಿದೇಶದಿಂದ ಹಣ ಬಂದಿದೆ ಎಂದು ಆರೋಪಿಸುತ್ತಾರೆ,” ಎಂದು ಲೇವಡಿ ಮಾಡಿದರು.

“ಅರಬ್ಬೀ ಸಮುದ್ರದ ಮೀನುಗಳಿಗೆ ಆಹಾರ ಮಾಡ್ತೀವಿ ಅಂತ ಬೆದರಿಕೆ ಹಾಕಿದ್ರು!”

ತಮಗೆ ಎದುರಾದ ಬೆದರಿಕೆಗಳು ಹಾಗೂ ಕರಾವಳಿಯ ನಂಟು ನೆನೆದ ಪ್ರಕಾಶ್ ರಾಜ್, ನಿಜವಾದ ಪ್ರಕಾಶ್ ರೈ ಯಾರೆಂದು ಗೊತ್ತಾಗಲಿ, “ನನಗೆ ನಟನಾಗುವುದಕ್ಕಿಂತ ವ್ಯಕ್ತಿಯಾಗಿ ಬೆಳೆಯುವುದು ಮುಖ್ಯ. ನಾನು ಪರದೆಯ ಮೇಲೆ ಮಾಡುವ ಪಾತ್ರಗಳು ಬರಿ ಪಾತ್ರಗಳಷ್ಟೇ, ಅದು ನಾನಲ್ಲ. ಸಾಯುವುದಕ್ಕೆ ಮುಂಚೆ ನಟನಾಗಷ್ಟೇ ಅಲ್ಲದೆ, ನಿಜವಾದ ಪ್ರಕಾಶ್ ರೈ ಯಾರು ಎಂದು ಸಮಾಜಕ್ಕೆ ಗೊತ್ತಾದ ಮೇಲೆ ಸಾಯುವುದು ಒಳ್ಳೆಯದು. ನಟನೆಗಿಂತ ನಾನು ತೆಗೆದುಕೊಳ್ಳುವ ಒಂದೊಂದು ನಿಲುವುಗಳೇ ನನ್ನ ನಿಜವಾದ ಸಂಪಾದನೆ,” ಎಂದರು.

“ದಕ್ಷಿಣ ಕನ್ನಡ ಜಿಲ್ಲೆಯ ಕೆಲವರಿಗೆ ಪ್ರಕಾಶ್ ರೈ ಅಂದರೆ ಇಷ್ಟವಿಲ್ಲ. ‘ಮಂಗಳೂರಿಗೆ ಯಾಕೆ ಬರ್ತಾನೋ ನೋಡ್ತೀವಿ, ಬರಲಿ ಅರಬ್ಬೀ ಸಮುದ್ರದ ಮೀನುಗಳಿಗೆ ಆಹಾರ ಮಾಡ್ತೀವಿ’ ಎಂದು ಬೆದರಿಕೆ ಹಾಕುತ್ತಾರೆ. ಆದರೆ ಅಂತಹವರ ನಡುವೆಯೂ ಸೌಹಾರ್ದ ಮನಸ್ಸಿನವರು ನನಗೆ ‘ಮಾನವ ರತ್ನ’ ಪ್ರಶಸ್ತಿ ನೀಡಿದ್ದಾರೆ,” ಎಂದು ಹರ್ಷ ವ್ಯಕ್ತಪಡಿಸಿದರು.

“ಅಂಬೇಡ್ಕರ್ ಸಂವಿಧಾನ ಬರೆದದ್ದು ಮನುಸ್ಮೃತಿ ದಬ್ಬಾಳಿಕೆ ವಿರುದ್ಧ”:

ದೇಶದ ಪ್ರಸ್ತುತ ರಾಜಕೀಯ ಹಾಗೂ ಸಂವಿಧಾನದ ಕುರಿತು ಮಾತನಾಡಿದ ಅವರು, ಮನುಸ್ಮೃತಿ ವಿರುದ್ಧ ಹೋರಾಟ: “ಅಂಬೇಡ್ಕರ್ ಸಂವಿಧಾನ ಬರೆದದ್ದು ಕೇವಲ ಬ್ರಿಟಿಷರ ಆಡಳಿತದಿಂದ ಸ್ವತಂತ್ರ ಪಡೆಯಲು ಅಲ್ಲ. ನಮ್ಮ ದೇಶದಲ್ಲಿ ದಲಿತರನ್ನು ಎಲ್ಲಿಡಬೇಕೋ ಅಲ್ಲಿಡಬೇಕು ಎನ್ನುವ ಮನುಸ್ಮೃತಿ ಇತ್ತು. ಮನುಸ್ಮೃತಿಯಿಂದ ನೊಂದ ಸಮಾಜವಿತ್ತು. ಸ್ವಾತಂತ್ರ್ಯದ ನಂತರ ಹೊಸ ಭಾರತ ಮತ್ತೆ ಮನುಸ್ಮೃತಿ ಕಡೆಗೆ ಹೋಗಬಾರದು ಎಂಬ ಕಾರಣಕ್ಕೆ ದಬ್ಬಾಳಿಕೆ ವಿರುದ್ಧ ಸಂವಿಧಾನ ಬರೆದರು. ಆದರೆ ಇಂದು ಅಂತಹ ಸಂವಿಧಾನವನ್ನು ಒಡೆಯುವ ಕೆಲಸ ನಡೆಯುತ್ತಿದೆ,” ಎಂದು ಕಳವಳ ವ್ಯಕ್ತಪಡಿಸಿದರು.

ದ್ವೇಷ ರಾಜಕಾರಣ & ಇಸ್ಲಾಮೋಫೋಬಿಯಾ:

“ಹಿಟ್ಲರ್‌ನಿಂದ ಹಿಡಿದು ಇಂದಿನ ಮಹಾಪ್ರಭುವರೆಗೂ ಸಮಾಜದಲ್ಲಿ ಸೌಹಾರ್ದತೆ ಇರಬಾರದು ಎಂದು ಮನೋವೈಜ್ಞಾನಿಕವಾಗಿ ಕೆಲಸ ಮಾಡುತ್ತಾರೆ. ಹಾವು, ಜಿರಳೆ ಕಂಡರೆ ಹೆದರುವ ಮನುಷ್ಯನ ಸೈಕಲಾಜಿಕಲ್ ಸಮಸ್ಯೆಯನ್ನೇ ಬಳಸಿಕೊಂಡು ದ್ವೇಷ ಹುಟ್ಟುಹಾಕುತ್ತಿದ್ದಾರೆ. ಇಸ್ಲಾಮೋಫೋಬಿಯಾ ಸೃಷ್ಟಿಸಿ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳ ಬಗ್ಗೆ ಭಯ ಹುಟ್ಟಿಸಿ, ಧರ್ಮ ಕಾಪಾಡುವ ಗುತ್ತಿಗೆ ತೆಗೆದುಕೊಂಡು ಗೆಲ್ಲುವ ರಾಜಕೀಯ ನಡೆಯುತ್ತಿದೆ,” ಎಂದು ವೀಕ್ಷಿಸಿದರು.

ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ: ದೇಶದ 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ಘೋಷಿಸಿದ ರಾಷ್ಟ್ರಪತಿ

“ಮುಂದಿನ ಎರಡು ವರ್ಷ ನಿಮ್ಮೊಂದಿಗೆ ಜಿಲ್ಲೆ ಜಿಲ್ಲೆಯಲ್ಲಿ ನಾನಿರ್ತೇನೆ”:

ಕರಾವಳಿಯ ಪ್ರಸ್ತುತ ಪರಿಸ್ಥಿತಿ ಕುರಿತು ಮಾತನಾಡಿದ ಪ್ರಕಾಶ್ ರಾಜ್, “ಇವರ ಆಡಳಿತದಲ್ಲಿ ಕರಾವಳಿಯ ಆರೋಗ್ಯ ಕೆಟ್ಟಿದೆ, ಆರ್ಥಿಕತೆ ಕುಸಿದಿದೆ, ಯುವಕರ ಭವಿಷ್ಯ ಹಾಳಾಗಿದೆ. ಎಲ್ಲದರ ಅಂಕಿ ಅಂಶ ತೆಗೆದು ನಾವು ಮಾತನಾಡಬೇಕಿದೆ. ಕರಾವಳಿಯಲ್ಲಿ ಎಸ್‌ಐಆರ್ (SIR) ಬಗ್ಗೆ ಎಲ್ಲರಿಗೂ ಸಹನೆಯಿಂದ ವಿವರಿಸಬೇಕಿದೆ. ಜನರ ಪರವಾಗಿ ಮಾತನಾಡುವ ಧ್ವನಿ ನಮಗೆ ಬೇಕು. ಮುಂದಿನ ಎರಡು ವರ್ಷ ನಿಮ್ಮೊಂದಿಗೆ ಪ್ರತಿಯೊಂದು ಜಿಲ್ಲೆಯಲ್ಲೂ ನಾನಿರುತ್ತೇನೆ,” ಎಂದು ಭರವಸೆ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ