ಸ್ಟಿಂಗ್‌ ಆಪರೇಷನ್‌ ಕೇಸ್‌ಗೆ ಸ್ಫೋಟಕ ತಿರುವು: ಎಚ್‌.ಡಿ.ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿದ ಕಮಿಷನರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆಸಲಾದ ಬಹುವಿವಾದಿತ ‘ಸ್ಟಿಂಗ್ ಆಪರೇಷನ್’ ಪ್ರಕರಣ ದಿನಕ್ಕೊಂದು ಹೊಸ ಹಾಗೂ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಸಿಸಿಬಿ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ, ಇದೀಗ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಬೆಂಗಳೂರು ನಗರ ಪೊಲೀಸರು ಬಹಿರಂಗವಾಗಿ ಪ್ರಸ್ತಾಪಿಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, “ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್ (ಹಸ್ತಾಂತರ) ಆಗಿದೆ,” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕುಮಾರಸ್ವಾಮಿ ನಿವಾಸದ ವಿಳಾಸದಲ್ಲಿದ್ದ ಆರೋಪಿ ರಿತೇಶ್ ಪಾಂಡೆ!

ನಗರ ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿಯಂತೆ, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರಿತೇಶ್ ಪಾಂಡೆ ಎಂಬಾತ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ದೆಹಲಿಯ ವಿಳಾಸದಲ್ಲಿದ್ದ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಜ್ವಲ್ ಪ್ರಸಾದ್ ಎಂಬಾತನ ಸೂಚನೆಯ ಮೇರೆಗೆ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ರಿತೀಶ್ ಪಾಂಡೆ ಹಾಗೂ ಪ್ರಜ್ವಲ್ ಪ್ರಸಾದ್‌ಗೆ ಹಣ ವರ್ಗಾವಣೆ (Financial transactions) ಆಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಿಮ್ ಇಲ್ಲದ ಮೊಬೈಲ್ ನೆಟ್‌ವರ್ಕ್ ಭೇದಿಸಿದ ಸಿಸಿಬಿ:

ವಿಡಿಯೋ ಅಪ್‌ಲೋಡ್ ಮಾಡಲು ಬಳಸಲಾಗಿದ್ದ ಮೊಬೈಲ್ ಜಾಲವನ್ನು ಸಿಸಿಬಿ ಪೊಲೀಸರು ಅತ್ಯಂತ ರೋಚಕವಾಗಿ ಭೇದಿಸಿದ್ದಾರೆ. ಆರೋಪಿ ರಿತೇಶ್ ಪಾಂಡೆ ಹಾಗೂ ವಿನೋದ್ ಶರ್ಮಾ ಎಂಬುವವರು ಸೆಪ್ಟೆಂಬರ್ 26ರಂದು ದೆಹಲಿಯಲ್ಲಿ ಮೊಬೈಲ್ ಖರೀದಿಸಿದ್ದರು. ಸಿಮ್ ಕಾರ್ಡ್ ಬಳಸಿ ವಿಡಿಯೋ ಅಪ್‌ಲೋಡ್ ಮಾಡಿದರೆ ಪೊಲೀಸರಿಗೆ ಸಿಕ್ಕಿಬೀಳುತ್ತೇವೆ ಎಂಬ ಕಾರಣಕ್ಕೆ, ಸಿಮ್ ಕಾರ್ಡ್ ಇಲ್ಲದೆ ವೈ-ಫೈ/ಇತರ ಮಾರ್ಗದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದರು. ಆದರೂ ತಾಂತ್ರಿಕ ತನಿಖೆ ನಡೆಸಿದ ಸಿಸಿಬಿ, ಮೊಬೈಲ್ ಮೂಲ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ‘ಸ್ಟಿಂಗ್ ಆಪರೇಷನ್’ ತನಿಖೆ ಚುರುಕು: ಹಿರಿಯ ಪತ್ರಕರ್ತನ ವಿಚಾರಣೆ ನಡೆಸಿದ CCB

ಆರೋಪಿ ರಿತೀಶ್ ಕುಮಾರ್ ತನ್ನ ಹೇಳಿಕೆಯಲ್ಲಿ, “ಪ್ರಜ್ವಲ್ ಪ್ರಸಾದ್ ಸೂಚನೆಯಂತೆ ನಾನು ದೆಹಲಿಯಲ್ಲಿ ಮೊಬೈಲ್ ಖರೀದಿಸಿದೆ. ನಂತರ ಕೇಂದ್ರ ಸಚಿವರ ಮನೆ ಬಳಿ ಬರುವಂತೆ ಹೇಳಿದಾಗ, ಅಲ್ಲಿಯೇ ಮೊಬೈಲ್ ಹಸ್ತಾಂತರಿಸಿದೆ,” ಎಂದು ಹೇಳಿಕೆ ನೀಡಿದ್ದಾನೆ. ಆರೋಪಿ ರಿತೇಶ್ ನೀಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿರುವ ಸಿಸಿಬಿ ಪೊಲೀಸರು, ಪ್ರಜ್ವಲ್ ಪ್ರಸಾದ್‌ಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಸಮನ್ಸ್/ನೋಟೀಸ್ ಜಾರಿ ಮಾಡಿದ್ದಾರೆ. ಪ್ರಜ್ವಲ್ ಪ್ರಸಾದ್ ವಿಚಾರಣೆ ನಡೆಸಿದ ಬಳಿಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸವನ್ನು ಪರಿಶೀಲಿಸುವ ಸಾಧ್ಯತೆ ದಟ್ಟವಾಗಿದೆ. ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿ ಪ್ರಕರಣ ಮುಗಿಯಿತು ಎನ್ನುವಷ್ಟರಲ್ಲೇ ನಗರ ಪೊಲೀಸ್ ಆಯುಕ್ತರ ಈ ಭಾರಿ ಹೇಳಿಕೆ ಜೆಡಿಎಸ್ ಹಾಗೂ ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ