ಹಾಂಗ್ ಕಾಂಗ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಪಡೆ ಮತ್ತೊಂದು ಐತಿಹಾಸಿಕ ಅಧ್ಯಾಯ ಬರೆದಿದೆ. ಹಾಂಗ್ ಕಾಂಗ್ ಸಿಕ್ಸಸ್ 2026 (Hong Kong Sixes) ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಅಫ್ಘಾನಿಸ್ತಾನ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಗುಲ್ಬದಿನ್ ನೈಬ್ ನಾಯಕತ್ವದ ಅಫ್ಘಾನ್ ಪಡೆ, ಟೂರ್ನಿಯುದ್ದಕ್ಕೂ ನಡೆಸಿದ ಸ್ಫೋಟಕ ಆಟವನ್ನು ಫೈನಲ್‌ನಲ್ಲೂ ಮುಂದುವರಿಸಿ ಆಸೀಸ್ ಪಡೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು.
ಆಸ್ಟ್ರೇಲಿಯಾದಿಂದ 115 ರನ್‌ಗಳ ಸ್ಪರ್ಧಾತ್ಮಕ ಮೊತ್ತ:
ಫೈನಲ್ ಹೆಣಗಾಟದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 6 ಓವರ್‌ಗಳ ಶಾರ್ಟ್ ಫಾರ್ಮ್ಯಾಟ್ ಪಂದ್ಯವಾಗಿದ್ದರಿಂದ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಆಸೀಸ್ ಬ್ಯಾಟರ್‌ಗಳು, ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 115 ರನ್ ಕಲೆಹಾಕಿದರು.
ಮ್ಯಾಕ್ಸ್ ಬ್ರ್ಯಾಂಟ್: ಕೇವಲ 14 ಎಸೆತಗಳಲ್ಲಿ 44 ರನ್
ಅಲೆಕ್ಸ್ ರಾಸ್: 10 ಎಸೆತಗಳಲ್ಲಿ ಅಜೇಯ 29 ರನ್
ಇಮ್ರಾನ್ ಮಿರ್ ಹಾಗೂ ಸಫಿ ಅಬ್ಬರ – 5 ಎಸೆತ ಬಾಕಿ ಇರುವಂತೆಯೇ ಗೆಲುವು!
116 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತ್ತು. ಆದರೆ, ಆ ನಂತರ ಕ್ರೀಸ್‌ಗಿಳಿದ ಇಮ್ರಾನ್ ಮಿರ್ ಮತ್ತು ಫರ್ಮಾನುಲ್ಲಾ ಸಫಿ ಸಿಕ್ಸರ್‌ಗಳ ಸುರಿಮಳೆ ಗೈದು ತಂಡವನ್ನು ಅದ್ಭುತವಾಗಿ ಜಯದತ್ತ ಕೊಂಡೊಯ್ದರು.
ಇಮ್ರಾನ್ ಮಿರ್: ಕೇವಲ 14 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 53 ರನ್
ಫರ್ಮಾನುಲ್ಲಾ ಸಫಿ: ಕೇವಲ 7 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 26 ರನ್ (ಅಜೇಯ)
ನಾಯಕ ಗುಲ್ಬದಿನ್ ನೈಬ್: 6 ಎಸೆತಗಳಲ್ಲಿ 17 ರನ್
ಅಂತಿಮವಾಗಿ ಅಫ್ಘಾನಿಸ್ತಾನ 5.1 ಓವರ್‌ಗಳಲ್ಲೇ (4 ವಿಕೆಟ್ ಗೆಲುವು) ಗುರಿ ತಲುಪಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್‌ಗೆ ಹೊಸ ನಾಯಕಿ!: ಹರ್ಮನ್‌ಪ್ರೀತ್ ಕೌರ್ ರಾಜೀನಾಮೆ, ಸ್ಮೃತಿ ಮಂಧನ ಕ್ಯಾಪ್ಟನ್
ಭಾರತ ತಂಡಕ್ಕೆ ನಿರಾಶಾದಾಯಕ 11ನೇ ಸ್ಥಾನ:
ಇನ್ನೊಂದೆಡೆ, ಭಾರತ ತಂಡದ ಪ್ರದರ್ಶನ ಟೂರ್ನಿಯುದ್ದಕ್ಕೂ ಕಳಪೆಯಾಗಿತ್ತು. ಗ್ರೂಪ್ ‘ಸಿ’ ಹಂತದಲ್ಲಿ ಪಾಕಿಸ್ತಾನ ಮತ್ತು ಯುಎಇ (UAE) ವಿರುದ್ಧ ಸೋಲು ಕಂಡು ಕಪ್ ರೇಸ್‌ನಿಂದ ಹೊರಬಿದ್ದಿದ್ದ ಟೀಂ ಇಂಡಿಯಾ, ನಂತರ ಬೌಲ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧವೂ ಪರಾಭವಗೊಂಡಿತು.
ಕೊನೆಯಲ್ಲಿ 11ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಿದ ಭಾರತ, 117 ರನ್‌ಗಳ ಗುರಿಯನ್ನು 5 ವಿಕೆಟ್‌ಗಳ ಅಂತರದಲ್ಲಿ ಬೆನ್ನಟ್ಟಿ ಗೆದ್ದು 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಪಂದ್ಯ ಸೋತ ಬಾಂಗ್ಲಾದೇಶ ಟೂರ್ನಿಯಲ್ಲಿ ಕೊನೆಯ (12ನೇ) ಸ್ಥಾನಕ್ಕೆ ತಳ್ಳಲ್ಪಟ್ಟಿತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

