ದ್ವಿತೀಯ ಪಿಯುಸಿ ಪ್ರಥಮ ರ‍್ಯಾಂಕ್ ವಿದ್ಯಾರ್ಥಿನಿಗೆ ಚಿನ್ನದ ನೆಕ್ಲೇಸ್ ನೀಡಿದ ವಿಜಯ್

ಚೆನ್ನೈ : ತಮಿಳುನಾಡಿನ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲು ಚೆನ್ನೈನಲ್ಲಿ ಬೃಹತ್ ಶೈಕ್ಷಣಿಕ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಈ ಮೊದಲ ಹಂತದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ದ್ವಿತೀಯ ಪಿಯುಸಿಯ ರಾಜ್ಯ ಮಟ್ಟದ ಪ್ರಥಮ ರ‍್ಯಾಂಕ್ ವಿಜೇತ ವಿದ್ಯಾರ್ಥಿನಿಗೆ ಸಿಎಂ ವಿಜಯ್  ಚಿನ್ನದ ನೆಕ್ಲೇಸ್ ತೊಡಿಸಿ ಗೌರವಿಸಿದರು. ಇದೇ ವೇಳೆ ಸಾಧನೆ ಮಾಡಿದ ನೂರಾರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ವಿತರಿಸಿ ಶುಭ ಕೋರಿದರು.

ತಿರುವಣ್ಣಾಮಲೈ ಮೂಲದ ವಿದ್ಯಾರ್ಥಿನಿ ಮೋನಿಕಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 566 ಅಂಕ ಗಳಿಸಿ ಸಾಧನೆ ಮಾಡಿದ್ದು, ಆಕೆಗೆ ವಿಜಯ್ ಚಿನ್ನದ ನೆಕ್ಲೇಸ್ ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋನಿಕಾ, “ವಿಜಯ್ ಅವರಿಂದಲೇ ಈ ಪ್ರಶಸ್ತಿ ಸ್ವೀಕರಿಸಿರುವುದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣ. ಇದು ಮುಂಬರುವ ಯುವ ತಲೆಮಾರಿಗೆ ಶಿಕ್ಷಣದಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

Advertisement

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ವಿಜಯ್, ಯುವಜನತೆಗೆ ರಾಜಕೀಯಕ್ಕಿಂತ ಶಿಕ್ಷಣವೇ ಮೊದಲ ಆದ್ಯತೆಯಾಗಬೇಕು ಎಂದು ಕರೆ ನೀಡಿದರು: “ನಾನಿಲ್ಲಿ ರಾಜಕೀಯ ಮಾತನಾಡಲು, ವೋಟ್ ಕೇಳಲು ಅಥವಾ ನನ್ನ ಪಕ್ಷದ ಬಗ್ಗೆ ಪ್ರಚಾರ ಮಾಡಲು ಬಂದಿಲ್ಲ. ಪ್ರಸ್ತುತ ಹಂತದಲ್ಲಿ ವಿದ್ಯಾರ್ಥಿಗಳಿಗೆ ರಾಜಕೀಯದ ಅಗತ್ಯವಿಲ್ಲ. ಮೊದಲು ಚೆನ್ನಾಗಿ ಓದಿ, ದೊಡ್ಡ ಮಟ್ಟದ ಸಾಧನೆ ಮಾಡಿ ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಿ. ಆ ನಂತರ ಸಮಾಜ ಹಾಗೂ ತಮಿಳುನಾಡಿನ ಏಳಿಗೆಯ ಬಗ್ಗೆ ಯೋಚಿಸಬಹುದು.”

ಇದನ್ನೂ ಓದಿ: ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಪರ ವಹಿಸಿದ ವಿಜಯ್ ಮಲ್ಯ: ಇಡಿ-ಸಿಬಿಐ ತನಿಖಾ ವೈಖರಿಗೆ ತೀವ್ರ ವಾಗ್ದಾಳಿ

Advertisement

 “ನಿಮ್ಮ ಸಾಧನೆಯ ಹಾದಿಯಲ್ಲಿ ಜನರು ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರೆ, ನಿಮ್ಮ ಗೆಲುವು ಈಗಾಗಲೇ ಖಚಿತವಾಗಿದೆ ಎಂದರ್ಥ. ಆದ್ದರಿಂದ ಯಾವುದೇ ಸವಾಲುಗಳಿಗೆ ಅಂಜದೆ ಮುನ್ನುಗ್ಗಿ. ಭ್ರಷ್ಟಾಚಾರ ಹಾಗೂ ಮಾದಕ ದ್ರವ್ಯಗಳಿಂದ ಸದಾ ದೂರವಿರಿ,” ಎಂದು ವಿಜಯ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement