ಬೆಂಗಳೂರು: ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯ ಬೆನ್ನಲ್ಲೇ, ಉದ್ಯಮಿ ಹಾಗೂ ಮದ್ಯದ ದೊರೆ ವಿಜಯ್ ಮಲ್ಯ ಅವರು ಸಚಿವರ ಬೆಂಬಲಕ್ಕೆ ನಿಂತಿದ್ದಾರೆ. ವಿಚಾರಣೆ ಅಥವಾ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ತನಿಖೆಯ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸುತ್ತಿರುವ ತನಿಖಾ ಸಂಸ್ಥೆಗಳ ನಡೆಗೆ ಮಲ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಉದ್ಯಮ ಮತ್ತು ಹೂಡಿಕೆಗಳ ವಿವರಗಳನ್ನು ಜಾರಿ ನಿರ್ದೇಶನಾಲಯವು ಮಾಧ್ಯಮ ಪ್ರಕಟಣೆ (Press Release) ಹಾಗೂ ‘ಎಕ್ಸ್’ (ಟ್ವಿಟರ್) ಖಾತೆಯ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡಿರುವುದನ್ನು ಮಲ್ಯ ಕಟುವಾಗಿ ಟೀಕಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಮಲ್ಯ ಆಕ್ರೋಶ:
ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಇಡಿ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯನ್ನು ಹಂಚಿಕೊಂಡಿರುವ ವಿಜಯ್ ಮಲ್ಯ, ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ಸರಣಿ ಪೋಸ್ಟ್ ಮಾಡಿದ್ದಾರೆ. “ಜಾರಿ ನಿರ್ದೇಶನಾಲಯವು ಇದನ್ನು ದೊಡ್ಡ ಸಾಧನೆ ಎಂಬಂತೆ ಬೀಗುತ್ತಿದೆ. ಯಾವುದೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ, ನ್ಯಾಯಾಲಯದಲ್ಲಿ ವಿಚಾರಣೆಯೂ ಮುಗಿದಿಲ್ಲ. ಇದು ಕೇವಲ ಸಾರ್ವಜನಿಕವಾಗಿ ಒಬ್ಬರ ವ್ಯಕ್ತಿತ್ವ ಹರಣ ಮಾಡುವ ತಂತ್ರ. ವಿಶ್ವದ ಯಾವ ದೇಶದಲ್ಲೂ ಹೀಗೆ ನಡೆಯುವುದಿಲ್ಲ. ದಯವಿಟ್ಟು ನೀವೇ ಆಲೋಚಿಸಿ,” ಎಂದು ಮಲ್ಯ ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ತೀವ್ರ ಆಕ್ರೋಶ ಹೊರಹಾಕಿರುವ ಅವರು, “ಯಾವುದೇ ನ್ಯಾಯಸಮ್ಮತ ವಿಚಾರಣೆ ಇಲ್ಲದೆ ತನಿಖಾ ಸಂಸ್ಥೆಯೊಂದು ಈ ರೀತಿ ಸಾರ್ವಜನಿಕವಾಗಿ ಡಂಗೂರ ಸಾರುವುದು ನಾಚಿಕೆಗೇಡಿನ ಸಂಗತಿ. ಜಗತ್ತಿನ ಯಾವ ದೇಶದಲ್ಲಾದರೂ ಇಂತಹ ಘಟನೆ ನಡೆಯುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ. ತಾವೂ ಸಹ ಭಾರತೀಯ ತನಿಖಾ ಸಂಸ್ಥೆಗಳ ತನಿಖೆಗೆ ಒಳಗಾಗಿರುವುದನ್ನು ಉಲ್ಲೇಖಿಸಿದ ಮಲ್ಯ, ಸಿಬಿಐ ಹಾಗೂ ಇಡಿ ಸಂಸ್ಥೆಗಳು ಹೆಣೆದಿರುವ ಸುಳ್ಳು ಆರೋಪಗಳನ್ನು ಶೀಘ್ರವೇ ಸಾರ್ವಜನಿಕವಾಗಿ ತೆರೆದಿಡುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ: ಬಿಜೆಪಿ ವಿರುದ್ಧ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ
“ಸತ್ಯವನ್ನು ತಿಳಿಯಲು ಬಯಸುವವರಿಗಾಗಿ, ವಂಚನೆಯಲ್ಲಿ ಸಿದ್ಧಹಸ್ತರಿರುವ ಸಿಬಿಐ ಮತ್ತು ಇಡಿ ಹೆಣೆದಿರುವ ಎಲ್ಲಾ ಸುಳ್ಳುಗಳು ಮತ್ತು ನಕಲಿ ಆರೋಪಗಳನ್ನು ನಾನು ಶೀಘ್ರದಲ್ಲೇ ಒಂದೊಂದಾಗಿ ರಟ್ಟು ಮಾಡುತ್ತೇನೆ. ನಾನು ಸತ್ಯಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದೇನೆ ಮತ್ತು ಸುಳ್ಳಿಗೆ ಎಂದಿಗೂ ತಲೆಬಾಗುವುದಿಲ್ಲ. ಆದರೆ ಈ ಸಂಸ್ಥೆಗಳ ಅನ್ಯಾಯದ ದಾಳಿಗೆ ತುತ್ತಾಗುತ್ತಿರುವ ಇತರ ಸಂತ್ರಸ್ತರನ್ನು ಕಂಡರೆ ನನಗೆ ಕನಿಕರವೆನಿಸುತ್ತದೆ. ಈ ಸಂಸ್ಥೆಗಳು ಏನು ಮಾಡುತ್ತವೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವ ವಿಷಯವೇ ಆಗಿದೆ,” ಎಂದು ಮಲ್ಯ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

