Breaking News

ತಾಲೂಕು ಮಟ್ಟದ ವಾಲಿಬಾಲ್‌ನಲ್ಲಿ ಮುಂಡೂರು ಶಾಲೆಗೆ ಚಾಂಪಿಯನ್ ಪಟ್ಟ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಂಜೇಶ್ವರ: ದರ್ಬೆಯ ಬೆಥನಿ ವಿದ್ಯಾ ಸಂಸ್ಥೆ ಪಾಂಗ್ಲಾಯಿಯಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ 14 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡೂರಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ತಂಡವು ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ತಾಲೂಕು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಗೆಲುವಿನ ಮೂಲಕ ತಂಡವು ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡಿದೆ.

ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪಾಸಿಂಗ್, ಸಂಘಟಿತ ಆಟ ಹಾಗೂ ಶಿಸ್ತಿನ ಒಗ್ಗಟ್ಟನ್ನು ಪ್ರದರ್ಶಿಸಿದ ಮುಂಡೂರು ಶಾಲೆಯ ವಿದ್ಯಾರ್ಥಿನಿಯರು ಎದುರಾಳಿ ತಂಡಗಳಿಗೆ ಕಠಿಣ ಸವಾಲೊಡ್ಡಿ ನೆರೆದಿದ್ದ ಕ್ರೀಡಾಭಿಮಾನಿಗಳ ಮನಗೆದ್ದರು.

ಖುಷಿ ಅಂಚನ್ ಹಾಗೂ ಲತಾಶ್ರೀಗೆ ವೈಯಕ್ತಿಕ ಪ್ರಶಸ್ತಿಯ ಗರಿ

ತಂಡದ ಅದ್ಭುತ ಗೆಲುವಿನ ಜೊತೆಗೆ ಶಾಲೆಯ ಇಬ್ಬರು ಆಟಗಾರ್ತಿಯರು ವೈಯಕ್ತಿಕ ವಿಭಾಗದಲ್ಲೂ ಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಂಡದ ನಾಯಕಿ ಖುಷಿ ಅಂಚನ್ ಅವರು ತಮ್ಮ ಆಲ್‌ರೌಂಡ್ ಆಟದ ಮೂಲಕ ಸರಣಿಯುದ್ದಕ್ಕೂ ಮಿಂಚಿ ‘ಬೆಸ್ಟ್ ಆಲ್ ರೌಂಡರ್’ ಪ್ರಶಸ್ತಿಗೆ ಭಾಜನರಾದರು.ನಿಖರವಾದ ಹಾಗೂ ಕಲಾತ್ಮಕ ಪಾಸಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದ ಲತಾಶ್ರೀ ಅವರು ‘ಬೆಸ್ಟ್ ಪಾಸರ್’ ಪ್ರಶಸ್ತಿಯನ್ನು ಪಡೆದುಕೊಂಡರು.

ಇದನ್ನೂ ಓದಿ: ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಮುಖವಾಡ ತಯಾರಿ ಮತ್ತು ಮುಖವರ್ಣಿಕಾ ತರಬೇತಿ: ಸಾಂಪ್ರದಾಯಿಕ ಕಲೆ ಕಲಿಯಲು ಒಂದಾದ 60 ವಿದ್ಯಾರ್ಥಿಗಳು

ಸಮರ್ಥ ತರಬೇತಿ ಹಾಗೂ ಶ್ಲಾಘನೆ:

ತಂಡದ ಈ ಅಭೂತಪೂರ್ವ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವನಿತಾ ಬಿ. ಅವರ ನಿರಂತರ ಶ್ರಮ, ತರಬೇತಿ ಹಾಗೂ ಮಾರ್ಗದರ್ಶನವೇ ಮುಖ್ಯ ಕಾರಣವಾಗಿದೆ. ಶಿಕ್ಷಕ ವೃಂದದ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ಕಠಿಣ ಅಭ್ಯಾಸ ನಡೆಸಿ ಈ ಮೈಲಿಗಲ್ಲು ಸಾಧಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮುಂಡೂರು ಶಾಲಾ ವಾಲಿಬಾಲ್ ತಂಡಕ್ಕೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ , ಪೋಷಕರು ಹಾಗೂ ಊರಿನ ಹಿತೈಷಿಗಳು ತೀವ್ರ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಅಲ್ಲದೆ ಮುಂಬರುವ ಜಿಲ್ಲಾ ಮಟ್ಟದ ಪಂದ್ಯಾಟದಲ್ಲೂ ತಂಡವು ಅತ್ಯುತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *