ಬಂಟ್ವಾಳ: ಇಂಟಾಕ್ ಮಂಗಳೂರು ಅಧ್ಯಾಯ, ಹೆಚ್.ಇ.ಸಿ.ಎಸ್. ಹಾಗೂ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯ ಇಂಟಾಕ್ ಹೆರಿಟೇಜ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಮಂಚಿ-ಕೊಳ್ನಾಡು ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನದ “ಮುಖವಾಡ ತಯಾರಿ ಮತ್ತು ಮುಖವರ್ಣಿಕೆ” ತರಬೇತಿ ಕಾರ್ಯಾಗಾರವು ಶನಿವಾರ (ಸೆಪ್ಟೆಂಬರ್ 12) ಕೊಳ್ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕರಾದ ಸುಭಾಷ್ ಚಂದ್ರ ಬಸು ಮಾತನಾಡಿ, “ನಮ್ಮ ನಾಡಿನ ಸಾಂಪ್ರದಾಯಿಕ ಕಲೆ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ. ವಿದ್ಯಾರ್ಥಿಗಳು ಬಾಲ್ಯದಲ್ಲೇ ಈ ಬಗ್ಗೆ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ಇತಿಹಾಸವನ್ನು ಜೀವಂತವಾಗಿಡಲು ಸಾಧ್ಯ,” ಎಂದರು.

ಖ್ಯಾತ ಚಿತ್ರಕಲಾವಿದ ಹಾಗೂ ಇಂಟಾಕ್ ಸದಸ್ಯ ರಾಜೇಂದ್ರ ಕೇದಿಗೆ ಮಾತನಾಡಿ, “ಮುಖವಾಡ ತಯಾರಿ ಮತ್ತು ಮುಖವರ್ಣಿಕೆಯು ವಿದ್ಯಾರ್ಥಿಗಳಲ್ಲಿ ಕೇವಲ ಕಲಾ ಕೌಶಲ್ಯವನ್ನಷ್ಟೇ ಅಲ್ಲದೆ, ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ,” ಎಂದು ಅಭಿಪ್ರಾಯಪಟ್ಟರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಕಲೆಯ ಅನುಭವ ಪಡೆದರು.
ಇದನ್ನೂ ಓದಿ: ನೇಪಾಳ ದುರಂತಕ್ಕೂ ಮುನ್ನ ಸಿಕ್ಕಿತ್ತಾ ದೈವಿಕ ಮುನ್ಸೂಚನೆ? ಪಲಾಂಚೋಕ್ ಭಗವತಿ ವಿಗ್ರಹ ಬೆವತ 2 ದಿನದಲ್ಲೇ ಪ್ರಳಯ

ಖ್ಯಾತ ಕಲಾವಿದ ಹರೀಶ್ ಕೊಡಿಯಾಲ್ ಬೈಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬಟ್ಟೆಯ ಮೂಲಕ ಮುಖದ ಅಚ್ಚು ತೆಗೆಯುವ ಹಾಗೂ ಮುಖವಾಡ ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಇನ್ನೋರ್ವ ಕಲಾವಿದೆ ರೇಷ್ಮಾ ಶೆಟ್ಟಿ ಅವರು ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಹಾಗೂ ಬಳಸುವ ವಿಧಾನಗಳ ಕುರಿತು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ತಾವು ತಯಾರಿಸಿದ ಮುಖವಾಡಗಳಿಗೆ ಯಕ್ಷಗಾನದ ವಿವಿಧ ವೇಷಗಳ ಬಣ್ಣಗಾರಿಕೆ ಮಾಡಿ ಕಲಾತ್ಮಕವಾಗಿ ಸಂಭ್ರಮಿಸಿದರು.
ಈ ಕಾರ್ಯಾಗಾರದಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲೆ, ನೂಜಿಬೈಲು ಅನುದಾನಿತ ಶಾಲೆ, ಮೋಂತಿಮಾರು ಶಾಲೆ, ಇರಾ ಪ್ರಾಥಮಿಕ ಶಾಲೆ ಹಾಗೂ ಪುದ್ದೊಟ್ಟು ಶಾಲೆಯ ಒಟ್ಟು 60 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಮುಖವಾಡಗಳನ್ನು ತಯಾರಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಟಾಕ್ ಮಂಗಳೂರು ಸದಸ್ಯೆ ಶರ್ವಾಣಿ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ್ ರಾವ್ ಮಂಚಿ, ಶಿಕ್ಷಕರಾದ ವಿಜಯಲಕ್ಷ್ಮಿ ಕಟೀಲು, ಯಶೋಧ, ರೇಖಾ ಹಾಗೂ ಪ್ರೌಢಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ಜಗನ್ನಾಥ ಪುರುಷ ಸ್ವಾಗತಿಸಿ, ತಾರಾನಾಥ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಶೀಲ ವಿಟ್ಲ ವಂದಿಸಿದರು.

