ಭೋಪಾಲ್ : ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಹರ್ದೀಪ್ ಸಿಂಗ್ ಪುರಿ ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆಯಬೇಕಿದ್ದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಗುರುವಾರ (ನ. 5) ಚುನಾವಣಾಧಿಕಾರಿ ಉಮೇಶ್ ಶರ್ಮಾ ಅವರು ಪುರಿ ಅವರನ್ನು ವಿಜೇತ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಕೇಂದ್ರ ಸಚಿವ ಎಲ್. ಮುರುಗನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಖಾಲಿಯಾಗಿದ್ದ ಈ ಸ್ಥಾನಕ್ಕೆ ಪುರಿ ಆಯ್ಕೆಯಾಗಿದ್ದಾರೆ. ಭೋಪಾಲ್ನ ವಿಧಾನಸೌಧದಲ್ಲಿ ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಅವರು ಪುರಿ ಅವರ ಪರವಾಗಿ ಆಯ್ಕೆಯ ಅಧಿಕೃತ ಪ್ರಮಾಣಪತ್ರವನ್ನು ಸ್ವೀಕರಿಸಿದರು.

ಮಧ್ಯಪ್ರದೇಶದ ರಾಜ್ಯಸಭಾ ಉಪಚುನಾವಣಾ ಕಣದಲ್ಲಿದ್ದ ಇಬ್ಬರೂ ಎದುರಾಳಿ ಅಭ್ಯರ್ಥಿಗಳ ನಾಮಪತ್ರಗಳು ರದ್ದಾಗಿದ್ದವು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಕುಮಾರ್ ಲೋಹಾನಿ ಅವರು ನಿಗದಿತ ಅವಧಿಯೊಳಗೆ ಅಫಿಡವಿಟ್ ಸಲ್ಲಿಸದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿತು. ಪಕ್ಷೇತರ ಅಭ್ಯರ್ಥಿ ಕಾಂತೆ ಸಾಯಣ್ಣ ಅವರ ನಾಮಪತ್ರ ಪರಿಶೀಲನೆ ವೇಳೆ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರದ್ದಾಯಿತು. ಇದರಿಂದಾಗಿ ಕಣದಲ್ಲಿದ್ದ ಏಕೈಕ ಅಭ್ಯರ್ಥಿಯಾದ ಹರ್ದೀಪ್ ಸಿಂಗ್ ಪುರಿ ಅವರ ಆಯ್ಕೆ ಸುಗಮವಾಯಿತು.
ಕಾಂಗ್ರೆಸ್ ಆಕ್ಷೇಪಣೆ ತಳ್ಳಿದ ಚುನಾವಣಾಧಿಕಾರಿ:
ವಿಪಕ್ಷ ಕಾಂಗ್ರೆಸ್ ಹಾಗೂ ಎದುರಾಳಿ ಅಭ್ಯರ್ಥಿಗಳು ಹರ್ದೀಪ್ ಸಿಂಗ್ ಪುರಿ ಅವರ ‘ಫಾರ್ಮ್ 26’ ಅಫಿಡವಿಟ್ ಅಪೂರ್ಣವಾಗಿದೆ ಎಂದು ಆರೋಪಿಸಿ ನಾಮಪತ್ರ ರದ್ದುಪಡಿಸುವಂತೆ ಪಟ್ಟು ಹಿಡಿದಿದ್ದರು. ಆದರೆ, ಆಕ್ಷೇಪಣೆಯನ್ನು ಸುದೀರ್ಘವಾಗಿ ಪರಿಶೀಲಿಸಿದ ಚುನಾವಣಾಧಿಕಾರಿ, “ಪುರಿ ಅವರ ನಾಮಪತ್ರವು ಜನಪ್ರಾತಿನಿಧ್ಯ ಕಾಯ್ದೆಯ ಎಲ್ಲಾ ನಿಯಮಾವಳಿಗಳಿಗೆ ಬದ್ಧವಾಗಿದ್ದು, ಯಾವುದೇ ಲೋಪವಿಲ್ಲ” ಎಂದು ಸ್ಪಷ್ಟಪಡಿಸಿ ಕಾಂಗ್ರೆಸ್ ಅರ್ಜಿಯನ್ನು ವಜಾಗೊಳಿಸಿದರು.

ಉತ್ತರ ಪ್ರದೇಶದಿಂದ ಮಧ್ಯಪ್ರದೇಶಕ್ಕೆ ರಾಜ್ಯಸಭಾ ಪಯಣ:
ಪ್ರಸ್ತುತ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದ ಹರ್ದೀಪ್ ಸಿಂಗ್ ಪುರಿ ಅವರ ಅವಧಿ ನವೆಂಬರ್ 25ಕ್ಕೆ ಕೊನೆಗೊಳ್ಳಲಿದೆ. ಕೇಂದ್ರ ಸಚಿವರಾಗಿ ಮುಂದುವರಿಯಲು ಅವರು ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿತ್ತು. ರಾಜಕೀಯ ಪ್ರವೇಶಿಸುವ ಮುನ್ನ ಪುರಿ ಅವರು 1974ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದ ಅವರು 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ 2013 ರಲ್ಲಿ ನಿವೃತ್ತರಾಗಿದ್ದರು. 2014ರ ಜನವರಿ 2ರಂದು ಬಿಜೆಪಿಗೆ ಸೇರ್ಪಡೆಗೊಂಡು ಮೋದಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ: “ರಾಜಕೀಯ ಪಕ್ಷಗಳ ದಾಳವಾಗಬೇಡಿ”: ದೆಹಲಿ CJP ಪ್ರತಿಭಟನೆಯಿಂದ ದೂರವಿರಲು ಮುಸ್ಲಿಂ ಸಮುದಾಯಕ್ಕೆ ಧರ್ಮಗುರುಗಳ ಕರೆ

ಎಪ್ಸ್ಟೀನ್ ವಿವಾದ ಹಾಗೂ ಸಚಿವರ ಸ್ಪಷ್ಟನೆ:
ಇತ್ತೀಚೆಗೆ ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಜೆಫ್ರಿ ಎಪ್ಸ್ಟೀನ್ ಸಂಬಂಧಿತ ಸಾರ್ವಜನಿಕ ದಾಖಲೆಗಳಲ್ಲಿ ಹರ್ದೀಪ್ ಸಿಂಗ್ ಪುರಿ ಅವರ ಇಮೇಲ್ ಹಾಗೂ ಫೋಟೋಗಳಿದ್ದವು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ತೀವ್ರ ದಾಳಿ ನಡೆಸಿದ್ದರು.
ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದ ಸಚಿವ ಪುರಿ, “2013-14ರಲ್ಲಿ ‘ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್’ ಪ್ರತಿನಿಧಿ ನಿಯೋಗದ ಭಾಗವಾಗಿ ಎಪ್ಸ್ಟೀನ್ ಅವರನ್ನು ಕೇವಲ ಮೂರ್ನಾಲ್ಕು ಬಾರಿ ವೃತ್ತಿಪರ ಕಾರಣಕ್ಕೆ ಭೇಟಿಯಾಗಿದ್ದೆ. ಎಪ್ಸ್ಟೀನ್ ಎಸಗಿದ ಯಾವುದೇ ಅಕ್ರಮ ಅಥವಾ ಲೈಂಗಿಕ ಅಪರಾಧ ಕೃತ್ಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ವಿಪಕ್ಷಗಳ ಆರೋಪ ಸಂಪೂರ್ಣ ರಾಜಕೀಯ ಪ್ರೇರಿತ,” ಎಂದು ತಿರುಗೇಟು ನೀಡಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

