ದೆಹಲಿ: ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶನಿವಾರ ಆಯೋಜಿಸಲಾಗಿರುವ CJP ಆಂದೋಲನ ಹಾಗೂ ಪ್ರತಿಭಟನೆಗಳಿಂದ ಸಂಪೂರ್ಣವಾಗಿ ದೂರವಿರಬೇಕೆಂದು ದೇಶದ ಪ್ರಮುಖ ಮುಸ್ಲಿಂ ಧರ್ಮಗುರುಗಳು ತಮ್ಮ ಸಮುದಾಯಕ್ಕೆ ಬಲವಾದ ಮನವಿ ಮಾಡಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ದೇಶವಿರೋಧಿ ಶಕ್ತಿಗಳು ಹುನ್ನಾರ ನಡೆಸುತ್ತಿದ್ದು, ಮುಸ್ಲಿಮರನ್ನು ರಾಜಕೀಯ ದಾಳಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಧಾರ್ಮಿಕ ಮುಖಂಡರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಹಾಗೂ ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಪ್ರತ್ಯೇಕವಾಗಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
“ನಮ್ಮನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ” – ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಕರೆ:
ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಯೊಬ್ಬರೂ ಅರಿಯಬೇಕು. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಮುಸ್ಲಿಮರನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ. ಆವೇಶದಿಂದ ನಿರ್ಧಾರ ತೆಗೆದುಕೊಳ್ಳದೆ ಯೋಚಿಸಿ ನಿರ್ಧಾರ ಕೈಗೊಳ್ಳಿ. ಹಿಂದೆ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿ ಇಂದಿಗೂ ಅನೇಕ ಯುವಕರು ಜೈಲಿನಲ್ಲಿದ್ದಾರೆ. ಅವರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದು, ಜಾಮೀನು ನೀಡುವವರೂ ಇಲ್ಲದಂತಾಗಿದೆ. ಅಂತಹ ತಪ್ಪನ್ನು ಮತ್ತೆ ಮಾಡಬೇಡಿ, ನಿಮ್ಮ ಮಕ್ಕಳನ್ನು ಇಂತಹ ಆಂದೋಲನಗಳಿಗೆ ಕಳುಹಿಸಬೇಡಿ. ದೆಹಲಿಯಲ್ಲಿ 144 ನೇ ವಿಧಿ ಜಾರಿಯಲ್ಲಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರೆ ಗಂಭೀರ ಪ್ರಕರಣಗಳು ದಾಖಲಾಗಿ ಜಾಮೀನು ಸಿಗುವುದು ಕಷ್ಟವಾಗಲಿದೆ.
ದೇಶದ ಎಲ್ಲಾ ಇಮಾಮ್‌ಗಳು ತಮ್ಮ ವ್ಯಾಪ್ತಿಯ ಮಸೀದಿಗಳಿಂದ ಆಯಾ ಪ್ರದೇಶದ ಮುಸ್ಲಿಂ ಸಮುದಾಯಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮೈಕ್ ಮೂಲಕ ಜಾಗೃತಿ ಸಂದೇಶ ಪ್ರಸಾರ ಮಾಡಬೇಕು ಎಂದು ಇಲ್ಯಾಸಿ ಮನವಿ ಮಾಡಿದ್ದಾರೆ. ಶಾಂತಿ ಭಂಗ ತರುವ ಅಥವಾ ಗಲಭೆಗೆ ಪ್ರಚೋದನೆ ನೀಡುವ ಯಾವುದೇ ಮೆಸೇಜ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮಾಡಬಾರದು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: “ಕುಮಾರಸ್ವಾಮಿ ನಿಂದಿಸಲು ಸಮಯವಿದೆ, ಕ್ಷೇತ್ರಕ್ಕೆ ಸಮಯವಿಲ್ಲ”: ಜೆಡಿಎಸ್ ಆರೋಪಗಳೇನು
“ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ” – ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ:
ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ, ಬರೇಲಿ ಮೂಲದ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಮಾತನಾಡಿ: “ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಕಾನೂನಾತ್ಮಕ ಹಕ್ಕು. ಆದರೆ ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ.” ಸಿಜೆಪಿ ಇತ್ತೀಚೆಗೆ ನಡೆಸಿದ ಪ್ರತಿಭಟನೆಗಳಲ್ಲಿ ಹಿಂಸಾಚಾರ ನಡೆದಿತ್ತು. ಹೀಗಾಗಿ ದೆಹಲಿ ಹಾಗೂ ಉತ್ತರ ಪ್ರದೇಶದ ಸುತ್ತಮುತ್ತಲ ಜಿಲ್ಲೆಗಳ ಮುಸ್ಲಿಂ ಯುವಕರು ಜಂತರ್ ಮಂತರ್‌ನಲ್ಲಿ ನಡೆಯಲಿರುವ ಈ ಧರಣಿಯಿಂದ ಸಂಪೂರ್ಣವಾಗಿ ದೂರವಿರಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

