Breaking News

ಅಮೆರಿಕದ ‘ಗ್ರೀನ್‌ ಕಾರ್ಡ್‌’ ಪ್ರೋಗ್ರಾಂನಿಂದ ಭಾರತೀಯ ಐಟಿ ಕಂಪನಿಗಳ ಅಮಾನತು: ಭಾರತಕ್ಕೆ ವರವಾಗಲಿದೆಯೇ ಕಠಿಣ ನಿರ್ಧಾರ?

ಬೆಂಗಳೂರು :ಇನ್ಫೋಸಿಸ್ (Infosys), ಕ್ಯಾಪ್‌ಜೆಮಿನಿ (Capgemini), ಟಿಸಿಎಸ್ ಸೇರಿದಂತೆ ಪ್ರಮುಖ ಐಟಿ ದೈತ್ಯ ಕಂಪನಿಗಳನ್ನು ತಮ್ಮ ‘ಪರ್ಮಾನೆಂಟ್ ಲೇಬರ್ ಸರ್ಟಿಫಿಕೇಶನ್’ (PERM) ಅಂದರೆ ‘ಗ್ರೀನ್‌ ಕಾರ್ಡ್‌’ ಕಾರ್ಯಕ್ರಮದಿಂದ ಅಮೆರಿಕ ಸರ್ಕಾರ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಈ ಬೆಳವಣಿಗೆಯಿಂದ ದೇಶದ ಐಟಿ ವಲಯದಲ್ಲಿ ತೀವ್ರ ಆತಂಕ ಎದುರಾಗಿದ್ದರೂ, ದೀರ್ಘಾವಧಿಯಲ್ಲಿ ಇದು ಭಾರತಕ್ಕೇ ಭಾರಿ ಲಾಭ ತಂದುಕೊಡಲಿದೆ ಎಂದು ಕರ್ನಾಟಕದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಸರ್ಕಾರದ ಈ ಕ್ರಮವು ಸಾಂಪ್ರದಾಯಿಕ ಐಟಿ ಔಟ್‌ಸೋರ್ಸಿಂಗ್ ಮಾದರಿಗೆ ತಾತ್ಕಾಲಿಕ ಸವಾಲು ತಂದೊಡ್ಡಬಹುದು. ಆದರೆ, ಭಾರತೀಯ ಟೆಕಿಗಳು ಅಮೆರಿಕಕ್ಕೆ ಹೋಗುವುದು ಕಷ್ಟವಾದಷ್ಟೂ, ಪ್ರಮುಖ ಜಾಗತಿಕ ಕಾರ್ಯಗಳು (High-value work) ಭಾರತಕ್ಕೆ ಹರಿದುಬರಲಿವೆ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಐಟಿ ಆಪರೇಷನ್ ವೆಚ್ಚ ಹೆಚ್ಚಳ – ಟೆಕಿಗಳಿಗೆ ಹಿನ್ನಡೆ?:

ಎಚ್-1ಬಿ (H-1B) ವೀಸಾ ಹೊಂದಿರುವ ಭಾರತೀಯ ಉದ್ಯೋಗಿಗಳು ಕಾಯಂ ನಿವಾಸಿ ಪರವಾನಗಿ ಅಂದರೆ ‘ಗ್ರೀನ್ ಕಾರ್ಡ್’ ಪಡೆಯಲು ಈ PERM ಪ್ರೋಗ್ರಾಂ ಅತ್ಯಂತ ನಿರ್ಣಾಯಕ ಹಂತವಾಗಿತ್ತು.

ಹೆಚ್ಚುವರಿ ವೆಚ್ಚ: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಟೆಕಿಗಳಿಗೆ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಐಟಿ ಸಂಸ್ಥೆಗಳಿಗೆ ಅಮೆರಿಕದಲ್ಲೇ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಹಾಗೂ ಹೊಸಬರನ್ನು ನಿಯೋಜಿಸುವುದು ಕಷ್ಟಕರವಾಗಲಿದೆ.

ಕಾರ್ಯಾಚರಣೆ ದುಬಾರಿ: ಈ ನಿರ್ಧಾರದಿಂದಾಗಿ ಅಮೆರಿಕದಲ್ಲಿ ಭಾರತೀಯ ಐಟಿ ಕಂಪನಿಗಳ ಕಾರ್ಯಾಚರಣೆಯ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ ಹಾಗೂ ಸ್ಥಳೀಯವಾಗಿ ಕೆಲಸ ನಿರ್ವಹಿಸುವ ನಮ್ಯತೆ ಕಡಿಮೆಯಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: “ಕುಮಾರಸ್ವಾಮಿ ನಿಂದಿಸಲು ಸಮಯವಿದೆ, ಕ್ಷೇತ್ರಕ್ಕೆ ಸಮಯವಿಲ್ಲ”: ಜೆಡಿಎಸ್ ಆರೋಪಗಳೇನು

“ಅಮೆರಿಕ ನಿರ್ಧಾರ ಭಾರತಕ್ಕೇ ವರ”:

GCC ಗಳ ವಿಸ್ತರಣೆಗೆ ಹೊಸ ಶಕ್ತಿ!:ಅಮೆರಿಕದ ಈ ನಿಯಮದಿಂದ ಭಾರತೀಯ ಎಂಜಿನಿಯರ್‌ಗಳು ಅಮೆರಿಕಕ್ಕೆ ತೆರಳುವುದು ದುಬಾರಿ ಹಾಗೂ ಕಷ್ಟಕರವಾದರೆ, ಜಾಗತಿಕ ಕಂಪನಿಗಳು ಕೆಲಸವನ್ನೇ ಭಾರತಕ್ಕೆ ತರಲಿವೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ.

ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳ (GCC) ಹೆಚ್ಚಳ:

ಭಾರತದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCCs) ವಿಸ್ತರಣೆ ಮತ್ತಷ್ಟು ವೇಗಗೊಳ್ಳಲಿದೆ. ಜಾಗತಿಕ ಕಂಪನಿಗಳು ತಮ್ಮ ಮುಖ್ಯ R&D (ಸಂಶೋಧನೆ ಮತ್ತು ಅಭಿವೃದ್ಧಿ) ಹಾಗೂ ಪ್ರಾಡಕ್ಟ್ ಡೆವಲಪ್‌ಮೆಂಟ್ ಆಫೀಸ್‌ಗಳನ್ನು ಭಾರತದಲ್ಲೇ ಸ್ಥಾಪಿಸಲಿವೆ.

ಹೈ-ಟೆಕ್ ಉದ್ಯೋಗಗಳಿಗೆ ಭಾರಿ ಬೇಡಿಕೆ: ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI), ಡೀಪ್ ಟೆಕ್ (Deep Tech) ಮತ್ತು ಹೊಸ ಆವಿಷ್ಕಾರಗಳ ಕ್ಷೇತ್ರಗಳಲ್ಲಿ ಭಾರತದಲ್ಲಿ ಹಿರಿಯ ತಂತ್ರಜ್ಞರಿಗೆ (Senior Technology Talent) ಭಾರಿ ಬೇಡಿಕೆ ಸೃಷ್ಟಿಯಾಗಲಿದೆ.

ಸೇವೆ ಒದಗಿಸುವ ದೇಶದಿಂದ ‘ಪ್ರಾಡಕ್ಟ್ ಸೆಂಟರ್’ ಆಗಿ ರೂಪಾಂತರ: ಭಾರತವು ಕೇವಲ ಜಗತ್ತಿಗೆ ಐಟಿ ಸೇವೆಗಳನ್ನು ಒದಗಿಸುವ ದೇಶವಾಗಿ ಮಾತ್ರ ಉಳಿಯದೆ, ಜಾಗತಿಕ ಮಟ್ಟದ ಪ್ರಮುಖ ‘ಉತ್ಪನ್ನ ಅಭಿವೃದ್ಧಿ’ ಮತ್ತು ‘ಕೃತಕ ಬುದ್ಧಿಮತ್ತೆ (AI) ಕೇಂದ್ರ’ವಾಗಿ ಹೊರಹೊಮ್ಮಲು ಇದು ಪೂರಕವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ