“ಕುಮಾರಸ್ವಾಮಿ ನಿಂದಿಸಲು ಸಮಯವಿದೆ, ಕ್ಷೇತ್ರಕ್ಕೆ ಸಮಯವಿಲ್ಲ”: ಜೆಡಿಎಸ್ ಆರೋಪಗಳೇನು?

ಬೆಂಗಳೂರು: ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದ ರಸ್ತೆಗಳ ದುಸ್ಥಿತಿ ಹಾಗೂ ಗುಂಡಿಗಳ ಸರಣಿ ವಿಚಾರವಾಗಿ ಶಾಸಕರೂ ಆಗಿರುವ ಸಚಿವ ಎಚ್.ಸಿ. ಬಾಲಕೃಷ್ಣ (H.C. Balakrishna) ವಿರುದ್ಧ ಜಾತ್ಯತೀತ ಜನತಾದಳ (JDS) ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಾತ್ಮಕ ಹಾಗೂ ತೀಕ್ಷ್ಣ ವಾಗ್ದಾಳಿ ನಡೆಸಿದೆ. “ಮುಂಬೈನಲ್ಲಿ ವಾಹನ ಚಲಾಯಿಸಿದರೆ ರಸ್ತೆಗಳು ‘ಸಂಗೀತ’ ನುಡಿಸುತ್ತವೆ, ಆದರೆ ಸಚಿವ ಎಚ್.ಸಿ. ಬಾಲಕೃಷ್ಣ ಅವರ ಮಾಗಡಿ ಕ್ಷೇತ್ರದಲ್ಲಿ ಬಿದ್ದಿರುವ ರಸ್ತೆ ಗುಂಡಿಗಳಿಗೆ ವಾಹನಗಳೇ ‘ಡ್ಯಾನ್ಸ್’ ಮಾಡುತ್ತಿವೆ” ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

ಸೋಷಿಯಲ್ ಮೀಡಿಯಾ ‘X’ನಲ್ಲಿ (ಟ್ವಿಟರ್) ಮಾಗಡಿ ಕ್ಷೇತ್ರದ ಹದಗೆಟ್ಟ ರಸ್ತೆಗಳ ವೀಡಿಯೋ ತುಣುಕನ್ನು ಹಂಚಿಕೊಂಡಿರುವ ಜೆಡಿಎಸ್, ಸಚಿವರ ವಿರುದ್ಧ ಹಲವು ಪ್ರಮುಖ ಆರೋಪಗಳನ್ನು ಮಾಡಿದೆ. “ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರನ್ನುನಿಂದಿಸಲು ಮತ್ತು ಅವರ ವಿರುದ್ಧ ಹೇಳಿಕೆ ನೀಡಲು ಕಾಂಗ್ರೆಸ್‌ನ ಈ ಸಚಿವರಿಗೆ ಗಂಟೆಗಟ್ಟಲೆ ಉಚಿತ ಸಮಯ ಸಿಗುತ್ತದೆ. ಆದರೆ, ತಮ್ಮದೇ ಮಾಗಡಿ ಕ್ಷೇತ್ರದ ರಸ್ತೆಗಳಲ್ಲಿ ಬಿದ್ದಿರುವ ಬೃಹತ್ ಗುಂಡಿಗಳನ್ನು ಮುಚ್ಚಲು ಅವರಿಗೆ ಕಿಂಚಿತ್ತೂ ಸಮಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇಲ್ಲಿದೆ ನೋಡಿ ಎಕ್ಸ್​​ ವಿಡಿಯೋ:


ಮಾಗಡಿ ಕ್ಷೇತ್ರದ ಸಾರ್ವಜನಿಕರು ಮತ್ತು ಸವಾರರು ನಿತ್ಯವೂ ಧೂಳು, ಹೊಂಡ ಹಾಗೂ ಬೃಹತ್ ರಸ್ತೆ ಗುಂಡಿಗಳಿಂದಾಗಿ ರಸ್ತೆಯಲ್ಲಿ ಸಂಚರಿಸಲಾಗದೆ ನರಕಯಾತನೆ ಅನುಭವಿಸುತ್ತಿದ್ದಾರೆ. “ಸಚಿವರೇ, ಬೇರೆಯವರ ಬಗ್ಗೆ ಟೀಕೆ-ಟಿಪ್ಪಣಿಗಳನ್ನು ಮಾಡುವ ಮುನ್ನ ನಿಮ್ಮ ಕ್ಷೇತ್ರದ ರಸ್ತೆಗಳ ಕಡೆಗೆ ಒಮ್ಮೆ ಕಣ್ಣೆತ್ತಿ ನೋಡಿ. ನಿಮಗೆ ಮತಹಾಕಿ ಗೆಲ್ಲಿಸಿದ ಜನರಿಗೆ ಕನಿಷ್ಠ ಪಕ್ಷ ಸುಸಜ್ಜಿತ ಮೂಲಸೌಕರ್ಯ ಹಾಗೂ ರಸ್ತೆ ಒದಗಿಸಿ” ಎಂದು ಜೆಡಿಎಸ್ ಸವಾಲು ಎಸೆದಿದೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರದ ನಿರ್ಧಾರ: ವೋಟ್‌ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಆಕ್ರೋಶ

ಸಚಿವ ಎಚ್.ಸಿ. ಬಾಲಕೃಷ್ಣ ಮತ್ತು ಕುಮಾರಸ್ವಾಮಿ ನಡುವಿನ ರಾಜಕೀಯ ವಾಕ್ಸಮರದ ಬೆನ್ನಲ್ಲೇ, ಮಾಗಡಿ ಕ್ಷೇತ್ರದ ರಸ್ತೆ ಗುಂಡಿಗಳ ವಿಷಯವನ್ನು ಜೆಡಿಎಸ್ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಸ್ಥಳೀಯ ಸಾರ್ವಜನಿಕ ವಲಯದಲ್ಲೂ ರಸ್ತೆ ದುರಸ್ತಿಗೆ ವ್ಯಾಪಕ ಆಗ್ರಹ ಕೇಳಿಬರುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *