ರಾಜಧಾನಿ ಬೆಚ್ಚಿಬೀಳಿಸಿದ ಸರಣಿ ಹತ್ಯೆ: 15 ದಿನಗಳಲ್ಲಿ 7 ಸಂಬಂಧಿಕರನ್ನು ಕೊಂದು ನಂದಿ ಬೆಟ್ಟದಲ್ಲಿ ಎಸೆದ ಪತ್ರಕರ್ತ

ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಬೆಚ್ಚಿಬೀಳುವಂತಹ ಅತ್ಯಂತ ಭೀಕರ ಹಾಗೂ ಅಮಾನವೀಯ ಸಾಮೂಹಿಕ ಹತ್ಯಾಕಾಂಡ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಇಡೀ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸುತ್ತಮುತ್ತ ಎಸೆದು ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ರಾಜಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಈ ಭೀಕರ ಕೊಲೆಯಿಂದ ನಗರ ಬೆಚ್ಚಿಬಿದ್ದಿದ್ದು, ತಡವಾಗಿ ಪ್ರಕರಣ ಬಯಲಿಗೆ ಬಂದಿದೆ.

ಶ್ರೀರಾಮಪುರದ ನಿವಾಸಿಗಳಾದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ 7 ವರ್ಷದ ಮೊಮ್ಮಗ ಪುನೀತ್ ಬರ್ಬರವಾಗಿ ಕೊಲೆಯಾದ ದುರ್ದೈವಿಗಳು. ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಆರೋಪಿ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗಿನ ನಿಕಟ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನ ಹೊಂದಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಪತ್ನಿಯ ತಾಯಿ ಮತ್ತು ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದುದು ಆರೋಪಿಯ ಕ್ರೋಧಕ್ಕೆ ಕಾರಣವಾಗಿತ್ತು.

Advertisement

ಪೂರ್ವಯೋಜಿತವಾಗಿ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ ಇಂದುಶೇಖರ್, ಅತ್ಯಂತ ಕ್ರೂರ ರೀತಿಯಲ್ಲಿ ಯೋಜನೆಯನ್ನು ಜಾರಿಗೊಳಿಸಿದ್ದಾನೆ. ಮೊದಲು ತನ್ನ ಮನೆಯಲ್ಲೇ ಪತ್ನಿ ಸುನೀತಾಳನ್ನು ರುಬ್ಬುಗುಂಡಿನಿಂದ ಜಜ್ಜಿ ಕೊಂದಿದ್ದಾನೆ. ಬಳಿಕ ಆಕೆಯ ಕುಟುಂಬದವರಿಗೆ ಅನುಮಾನ ಬಾರದಂತೆ ಸುನೀತಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ. ನಂತರ ಮದ್ಯಪಾನ ಹಾಗೂ ಇತರ ನೆಪಗಳಲ್ಲಿ ಬಾಮೈದರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ನಳಿನಿ, ದಿವ್ಯಾ, ಅತ್ತೆ ರೂಪವತಿ ಹಾಗೂ 7 ವರ್ಷದ ಬಾಲಕ ಪುನೀತ್‌ನನ್ನು ಕಳೆದ 15-20 ದಿನಗಳಿಂದ ಒಬ್ಬೊಬ್ಬರನ್ನೇ ಕರೆಯಿಸಿಕೊಂಡು ರುಬ್ಬುಗುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ನಾಪತ್ತೆ ದೂರಿನಿಂದ ಬಯಲಾಯ್ತು ಶವಗಳ ರಹಸ್ಯ:

ಕೊಲೆಯಾದ ನಳಿನಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಇಂದುಶೇಖರ್‌ನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ ನೀಡಿದ ಗೊಂದಲಕಾರಿ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿದ್ದವು. ತಕ್ಷಣವೇ ಆತನ ರಾಜಾಜಿನಗರ ಮನೆಯ ಪರಿಶೀಲನೆ ನಡೆಸಿದಾಗ ರಕ್ತದ ಕಲೆಗಳ ಸುಳಿವು ಸಿಕ್ಕಿದ್ದು, ತೀವ್ರ ವಿಚಾರಣೆ ವೇಳೆ ಆರೋಪಿ ತಾನೇ ಎಸಗಿದ ಸರಣಿ ಕೊಲೆಗಳನ್ನು ಒಪ್ಪಿಕೊಂಡಿದ್ದಾನೆ.

Advertisement

ನಂದಿ ಬೆಟ್ಟದಲ್ಲಿ ಕಾರ್ಯಾಚರಣೆ: ಮಗುವಿನ ಶವ ಪತ್ತೆ

ಹತ್ಯೆಯ ಬಳಿಕ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸುತ್ತಮುತ್ತಲ ಕಣಿವೆ ಹಾಗೂ ಕಾಡುಗಳಲ್ಲಿ ಎಸೆದಿದ್ದ. ಗುರುವಾರ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಸತತ 4 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದು, ಬಾಲಕ ಪುನೀತ್‌ನ ಮೃತದೇಹ ಪತ್ತೆಯಾಗಿದೆ. ಉಳಿದ 6 ಮೃತದೇಹಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಹತ್ಯೆಯ ಬಳಿಕ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ ರುಬ್ಬುಗುಂಡನ್ನೂ ತೊಳೆದಿಟ್ಟಿದ್ದ ಆರೋಪಿ, ಶವ ಸಾಗಿಸಲು ಬಳಸಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Advertisement

ಠಾಣಾ ವರದಿ ಪತ್ರಿಕೆ ನಡೆಸುತ್ತಿದ್ದ ಆರೋಪಿ; ಮನೆ ಮಾಲೀಕನಿಗೂ ಕಿರುಕುಳ!

ಆರೋಪಿ ಇಂದುಶೇಖರ್‌ ‘ಠಾಣಾ ವರದಿ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದು, ಕಳೆದ 8 ವರ್ಷಗಳಿಂದ ಭಾಷ್ಯಂ ಸರ್ಕಲ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಮನೆ ಮಾಲೀಕರ ನಕಲಿ ಸಹಿ ಮಾಡಿ ಬಿಲ್ಡಿಂಗ್ ಮೇಲೆ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದ ಆರೋಪಿ, ನಿರಂತರ ಕಿರುಕುಳ ನೀಡುತ್ತಿದ್ದ. ಈ ಮಾನಸಿಕ ಕೊರಗಿನಿಂದಲೇ ಕಟ್ಟಡದ ಮಾಲೀಕರು ಅಕಾಲಿಕವಾಗಿ ಸಾವನ್ನಪ್ಪಿದ್ದರು ಎಂಬ ಭೀಕರ ಸತ್ಯವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬಂಟ್ವಾಳ: ಸ್ಟುಡಿಯೋ ಮಾಲೀಕನ ಕೊಲೆ ಯತ್ನ ಪ್ರಕರಣ; ನಾಲ್ವರು ಅಪರಾಧಿಗಳಿಗೆ 7 ವರ್ಷ ಜೈಲು

ಹಿರಿಯ ಪೊಲೀಸ್ ಅಧಿಕಾರಿಗಳಿಂದ ತೀವ್ರ ತನಿಖೆ:

ಘಟನೆಯ ಗಂಭೀರತೆ ಅರಿತು ಪಶ್ಚಿಮ ವಿಭಾಗದ ಜಂಟಿ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲೇ ಮೊಕ್ಕಾಂ ಹೂಡಿ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಡಿಸಿಪಿ ನೇತೃತ್ವದಲ್ಲಿ 3 ಎಸಿಪಿಗಳ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದ್ದು, ನಂದಿಬೆಟ್ಟದ ಬಳಿ ಶವಗಳ ಶೋಧಕ್ಕೆ ತಂಡಗಳನ್ನು ರವಾನಿಸಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ