ಸೂರ್ಯಕುಮಾರ್ ಯಾದವ್ ಪ್ರಧಾನಿ ಮೋದಿ ಭೇಟಿ: ಪುಟಾಣಿಯ ಗಣೇಶ ಸ್ತೋತ್ರಕ್ಕೆ ತಾಳ ಹಾಕಿದ ಪ್ರಧಾನಿ

ದೆಹಲಿ: ಭಾರತದ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ತಮ್ಮ ಕುಟುಂಬದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಸೂರ್ಯಕುಮಾರ್ ಯಾದವ್, ಅವರ ಪತ್ನಿ ದೇವಿಶಾ ಶೆಟ್ಟಿ ಹಾಗೂ ಮಗಳು ರಿದ್ಧಿಮಾ ಅವರು ಪ್ರಧಾನಿಯವರನ್ನು ಭೇಟಿಯಾದ ಅಪರೂಪದ ಹಾಗೂ ಭಾವುಕ ಕ್ಷಣದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಭೇಟಿಯ ವೇಳೆ ಸೂರ್ಯಕುಮಾರ್ ಯಾದವ್ ಅವರು 2026ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಐತಿಹಾಸಿಕ ಚಿನ್ನದ ಪದಕವನ್ನು ಧರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸೂರ್ಯಕುಮಾರ್ ಅವರ ಪದಕವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು, ಭಾರತದ ಈ ಐತಿಹಾಸಿಕ ಜಯವನ್ನು ಸಂಭ್ರಮಿಸಿ ಶ್ಲಾಘಿಸಿದರು.

Advertisement

ಈ ಭೇಟಿಯ ಪ್ರಮುಖ ಆಕರ್ಷಣೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋವೊಂದು ದೇಶಾದ್ಯಂತ ಭಾರಿ ಗಮನ ಸೆಳೆಯುತ್ತಿದೆ. ವಿಡಿಯೋದಲ್ಲಿ ಸೂರ್ಯಕುಮಾರ್ ಯಾದವ್ ಅವರ ಸಮ್ಮುಖದಲ್ಲೇ ಪುಟ್ಟ ಬಾಲಕಿಯೊಬ್ಬಳು ಅತ್ಯಂತ ಸುಮಧುರವಾಗಿ ಕನ್ನಡದಲ್ಲಿ ಗಣೇಶನ ಭಕ್ತಿಗೀತೆಯನ್ನು ಹಾಡಿದ್ದಾಳೆ.

ಬಾಲಕಿ ಕನ್ನಡದಲ್ಲಿ ಮುದ್ದಾಗಿ ಹಾಡುತ್ತಿದ್ದಂತೆ ಪ್ರಧಾನಿ ಮೋದಿ ಅವರು ತಲೆದೂಗುತ್ತಾ ತಮ್ಮ ಕೈಗಳಿಂದ ಮೆಲ್ಲನೆ ತಾಳ ಹಾಕುವ ಮೂಲಕ ಆಕೆಗೆ ಪ್ರೋತ್ಸಾಹ ನೀಡಿದ್ದಾರೆ.  ಪ್ರಧಾನಿಯವರ ಸಮ್ಮುಖದಲ್ಲಿ ಕನ್ನಡದ ಭಕ್ತಿಗೀತೆಯನ್ನು ಅತ್ಯಂತ ಮುಗ್ಧತೆಯಿಂದ ಹಾಡಿದ ಈ ಬಾಲಕಿಯ ಭಕ್ತಿಗೆ ಹಾಗೂ ಆಕೆಯ ಕನ್ನಡದ ಉಚ್ಚಾರಣೆಗೆ ದೇಶದಾದ್ಯಂತ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Advertisement

ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಮೈದಾನದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.  2022 ಮತ್ತು 2023ರಲ್ಲಿ ಸತತವಾಗಿ ‘ಐಸಿಸಿ ವರ್ಷದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟಿಗ’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ: ಭಾರತದ ಜಿಡಿಪಿ ದರ ಶೇ. 7.8 ಕ್ಕೆ ಏರಿಕೆ: ನರೇಂದ್ರ ಮೋದಿ ಸಂತಸ, ಟೀಕಾಕಾರರಿಗೆ ಪ್ರಧಾನಿ ತಿರುಗೇಟು

Advertisement

 2022ರ ಅಕ್ಟೋಬರ್‌ನಲ್ಲಿ ಐಸಿಸಿ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದ ಇವರು, 2023ರ ಜನವರಿಯಲ್ಲಿ 910 ರೇಟಿಂಗ್ ಅಂಕಗಳನ್ನು ಗಳಿಸುವ ಮೂಲಕ ಟಿ20 ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ರೇಟಿಂಗ್‌ಗಳಲ್ಲಿ ಒಂದನ್ನು ಪಡೆದಿದ್ದರು.  2024ರ ಟಿ20 ವಿಶ್ವಕಪ್ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೂರ್ಯಕುಮಾರ್, ಬಳಿಕ ನಾಯಕತ್ವ ವಹಿಸಿಕೊಂಡು 2026ರ ಟಿ20 ವಿಶ್ವಕಪ್‌ನಲ್ಲೂ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಈ ಮೂಲಕ ಸತತ ಎರಡು ಟಿ20 ವಿಶ್ವಕಪ್ ಗೆದ್ದ ವಿಶ್ವದ ಮೊದಲ ತಂಡ ಎಂಬ ಚಾರಿತ್ರಿಕ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇಷ್ಟೇ ಅಲ್ಲದೆ, 2025ರಲ್ಲಿ ಯುಎಇಯಲ್ಲಿ ನಡೆದ ಟಿ20 ಏಷ್ಯಾಕಪ್‌ನಲ್ಲೂ ಇವರ ನಾಯಕತ್ವದಲ್ಲೇ ಭಾರತ ಟ್ರೋಫಿ ಎತ್ತಿಹಿಡಿದಿತ್ತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ