ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ-ಉಮಾಪತಿ ಡಿವೋರ್ಸ್? ನಟ ತಂಬಿ ರಾಮಯ್ಯ ಹೇಳಿದ್ದೇನು?

ಚೆನ್ನೈ :  ಕಾಲಿವುಡ್‌ನ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಪುತ್ರಿ, ನಟಿ ಐಶ್ವರ್ಯಾ ಸರ್ಜಾ ಹಾಗೂ ನಟ-ನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ವಿಚ್ಛೇದನ (Divorce) ಪಡೆಯಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆಬಿದ್ದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗ ಹಾಗೂ ಸೊಸೆಯ ಸಂಸಾರದ ಬಗ್ಗೆ ಸುಳ್ಳು ಸುದ್ದಿ ಹರಡಿದವರ ವಿರುದ್ಧ ನಟ ತಂಬಿ ರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯ ನಿಜಾಂಶವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ವಿವಾಹಬಂಧನಕ್ಕೆ ಕಾಲಿಟ್ಟಿದ್ದ ಐಶ್ವರ್ಯಾ ಸರ್ಜಾ ಮತ್ತು ಉಮಾಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇಬ್ಬರೂ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿತ್ತು. “ಸಂದರ್ಶನಗಳಲ್ಲಿ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಿದ್ದ ಈ ಜೋಡಿಗೆ ಮದುವೆಯಾಗಿ ಎರಡು ವರ್ಷವೂ ಪೂರ್ಣಗೊಳ್ಳುವ ಮುನ್ನವೇ ಏನಾಯಿತು?” ಎಂದು ಅಭಿಮಾನಿಗಳು ಹಾಗೂ ನೆಟ್ಟಿಗರು ತೀವ್ರ ಆಘಾತ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಸುಳ್ಳು ವದಂತಿಗಳಿಗೆ ಮುಕ್ತಾಯ ಹಾಡುವ ನಿಟ್ಟಿನಲ್ಲಿ, ಹಿರಿಯ ಪತ್ರಕರ್ತ ಬಯಿಲ್ವಾನ್ ರಂಗನಾಥನ್ ಅವರ ಮೂಲಕ ನಟ ತಂಬಿ ರಾಮಯ್ಯ ಅವರು ಈ ಕೆಳಗಿನಂತೆ ಸ್ಪಷ್ಟನೆ ನೀಡಿದ್ದಾರೆ.   “ನಾವೆಲ್ಲಾದರೂ ನಮ್ಮ ಮಕ್ಕಳಿಗೆ ವಿಚ್ಛೇದನವಾಗಿದೆ ಎಂದು ಹೇಳಿದ್ದೇವೆಯೇ? ಯಾರು ಇಂತಹ ನೀಚ ಮಟ್ಟದ ವದಂತಿಗಳನ್ನು ಹರಡುತ್ತಿದ್ದಾರೋ ತಿಳಿಯುತ್ತಿಲ್ಲ. ಇದು ನೂರಕ್ಕೆ ನೂರರಷ್ಟು ಸಂಪೂರ್ಣ ಸುಳ್ಳು ಸುದ್ದಿ” ಎಂದು ಆಕ್ರೋಶ ಹೊರಹಾಕಿದ್ದಾರೆ.

Advertisement

ಇದನ್ನೂ ಓದಿ: ‘ಕಾಂತಾರ’ ಸಿನಿಮಾ ತೆರೆಕಂಡು 4 ವರ್ಷ!: ಜಗತ್ತಿನಾದ್ಯಂತ ಪ್ರೀತಿ ತೋರಿದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

“ಈ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಬೇಕೆಂದರೆ ಸತ್ಯವನ್ನು ಹೇಳಲೇಬೇಕು. ಉಮಾಪತಿ ಹಾಗೂ ಐಶ್ವರ್ಯಾ ಚೆನ್ನೈನ ಮೈಲಾಪೋರ್‌ನಲ್ಲಿ ಪ್ರತ್ಯೇಕವಾಗಿ ಸುಂದರವಾದ ಮನೆಯೊಂದನ್ನು ಮಾಡಿಕೊಂಡು ಅತ್ಯಂತ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಚೆನ್ನಾಗಿ ಬಾಳುತ್ತಿರುವ ಮಕ್ಕಳ ಜೀವನದಲ್ಲಿ ಏಕೆ ಬೆಂಕಿ ಹಚ್ಚುತ್ತೀರಾ?” ಎಂದು ತಂಬಿ ರಾಮಯ್ಯ ಅತ್ಯಂತ ಭಾವುಕರಾಗಿ ಪ್ರಶ್ನಿಸಿದ್ದಾರೆ.

Advertisement

ನಟ ತಂಬಿ ರಾಮಯ್ಯ ಅವರ ಈ ಖಡಕ್ ಸ್ಪಷ್ಟನೆಯಿಂದಾಗಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಐಶ್ವರ್ಯಾ-ಉಮಾಪತಿ ಡಿವೋರ್ಸ್ ವದಂತಿ ಸಂಪೂರ್ಣವಾಗಿ ಸುಳ್ಳು ಎಂಬುದು ಸಾಬೀತಾಗಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ