‘ಕಾಂತಾರ’ ಸಿನಿಮಾ ತೆರೆಕಂಡು 4 ವರ್ಷ!: ಜಗತ್ತಿನಾದ್ಯಂತ ಪ್ರೀತಿ ತೋರಿದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮಹತ್ತರ ಮೈಲಿಗಲ್ಲು ಸ್ಥಾಪಿಸಿ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ‘ಕಾಂತಾರ’ (Kantara) ಸಿನಿಮಾ ಬಿಡುಗಡೆಯಾಗಿ ಇಂದಿಗೆ ಬರೋಬ್ಬರಿ 4 ವರ್ಷಗಳು ಪೂರ್ಣಗೊಂಡಿವೆ. ಈ ವಿಶೇಷ ಸಂದರ್ಭದಲ್ಲಿ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ವಿಶ್ವದಾದ್ಯಂತ ಸಿನಿಮಾ ಕೊಂಡಾಡಿದ ಕೋಟ್ಯಂತರ ಪ್ರೇಕ್ಷಕರಿಗೆ ಹಾಗೂ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ದೈವಾರಾಧನೆ ಹಾಗೂ ಮಣ್ಣಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30, 2022 ರಂದು ತೆರೆಕಂಡು ರಾಷ್ಟ್ರಮಟ್ಟದ ಪ್ರಶಸ್ತಿಗಳು ಸೇರಿದಂತೆ ಪ್ರೇಕ್ಷಕರ ಅಪಾರ ಪ್ರೀತಿಯನ್ನು ಗಳಿಸಿ ಇತಿಹಾಸ ಸೃಷ್ಟಿಸಿತ್ತು.

“ಕಾಂತಾರ ಕೇವಲ ಸಿನಿಮಾವಲ್ಲ, ನನ್ನೊಳಗಿದ್ದ ನಂಬಿಕೆ”: ರಿಷಬ್ ಶೆಟ್ಟಿ ಭಾವುಕ ಪೋಸ್ಟ್

ಚಿತ್ರ ಬಿಡುಗಡೆಯಾಗಿ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಕಾಂತಾರ ತೆರೆಕಂಡು 4 ವರ್ಷಗಳಾಗಿವೆ. ನಂತರ ನಡೆದಿದ್ದೆಲ್ಲವೂ ಇತಿಹಾಸ. ದೇಶ-ವಿದೇಶಗಳಿಂದ ಪ್ರಶಸ್ತಿ, ಪ್ರಶಂಸೆಗಳು ಹರಿದುಬಂದವು. ಆದರೆ ನೀವು ತೋರಿದ ಪ್ರೀತಿ ಅಪ್ರತಿಮ. ಇದು ನಾನು ಮಾಡಿದ ಬರಿ ಸಿನಿಮಾವಷ್ಟೇ ಆಗಿರಲಿಲ್ಲ. ಇದು ನಾನು ಬಾಳಿದ ಪ್ರಪಂಚ, ನನ್ನೊಳಗೆ ಹೊತ್ತು ತಂದ ಕಥೆ ಹಾಗೂ ನನ್ನನ್ನು ರೂಪಿಸಿದ ನಂಬಿಕೆ.” ಎಂದು ಹೇಳಿದರು.

 

ತಮ್ಮೊಂದಿಗೆ ಶ್ರಮಿಸಿದ ತಾಂತ್ರಿಕ ವರ್ಗ ಮತ್ತು ಕಲಾವಿದರನ್ನು ಸ್ಮರಿಸಿದ ಅವರು, “ಮನದಾಳದ ಕಥೆಯನ್ನು ಪರದೆ ಮೇಲೆ ತರಲು ನನ್ನೊಂದಿಗೆ ಹೆಜ್ಜೆ ಹಾಕಿದ, ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪರಿಶ್ರಮ, ನಂಬಿಕೆ ಮತ್ತು ಪ್ರೀತಿಯೇ ಕಾಂತಾರವನ್ನು ನನಗಿಂತ ದೊಡ್ಡದಾಗಿಸಿತು,” ಎಂದು ಕೃತಜ್ಞತೆ ತಿಳಿಸಿದ್ದಾರೆ.

ಇದನ್ನೂ ಓದಿ: ಗಜ, ಬಚ್ಚನ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಪ್ರದೀಪ್ ರಾವತ್ ನಿಧನ

ಅಲ್ಲದೆ, “ನನ್ನ ಈ ಪ್ರಯತ್ನವನ್ನು ಕೊಂಡಾಡಿ, ಅದನ್ನು ಗಡಿದಾಟಿಸಿ, ಕನ್ನಡದ ಹೆಮ್ಮೆಯ ಸಿನಿಮಾವಾಗಿ ಇಡೀ ಪ್ರಪಂಚಕ್ಕೆ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ನಾನು ಎಂದೆಂದಿಗೂ ಚಿರಋಣಿ. ನಾಲ್ಕು ವರ್ಷಗಳ ನಂತರವೂ ನಿಮ್ಮ ಪ್ರೀತಿ ಅದೇ ರೀತಿ ಇದೆ. ಈ ದಂತಕಥೆ ನಿಮ್ಮೆಲ್ಲರಿಗೂ ಸೇರಿದ್ದು,” ಎಂದು ಪ್ರೇಕ್ಷಕರನ್ನು ಕೊಂಡಾಡಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *