ಮುಜಫ್ಫರ್ನಗರ : ಉತ್ತರ ಪ್ರದೇಶದ ಮುಜಫ್ಫರ್ನಗರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ (ನವೆಂಬರ್ 9) ಮುಂಜಾನೆ ಭೀಕರ ದುರಂತವೊಂದು ಸಂಭವಿಸಿದೆ. ಅತಿಯಾದ ವೇಗದಲ್ಲಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬ ಹಾಗೂ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ಆರು ಜನರು ಸಜೀವ ದಹನಗೊಂಡಿದ್ದಾರೆ. ಹರಿಯಾಣದ ಜೀಂದ್ ಜಿಲ್ಲೆಯ ನಿವಾಸಿಗಳೆಂದು ಶಂಕಿಸಲಾದ ಇವರು, ಮುಂಜಾನೆ ಹರಿದ್ವಾರದತ್ತ ಪ್ರಯಾಣಿಸುತ್ತಿದ್ದಾಗ ಪಾನಿಪತ್-ಖತಿಮಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳು ಮತ್ತು ಪ್ರಾಥಮಿಕ ತನಿಖೆಯ ಪ್ರಕಾರ, ಅತಿಯಾದ ವೇಗದಲ್ಲಿದ್ದ ಕಾರಿನ ಚಾಲಕ ದಿಢೀರನೆ ನಿಯಂತ್ರಣ ಕಳೆದುಕೊಂಡಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲು ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುಮಾರು 10 ಮೀಟರ್ಗಳಷ್ಟು ಉದ್ದದ ರಸ್ತೆ ಡಿವೈಡರ್ ಅನ್ನು ಪುಡಿಪುಡಿ ಮಾಡುತ್ತಾ ರಸ್ತೆಯ ಇನ್ನೊಂದು ಬದಿಗೆ ಕಾರು ಉರುಳಿಬಿದ್ದಿದೆ. ಡಿಕ್ಕಿಯಾದ ಕೆಲವೇ ನಿಮಿಷಗಳಲ್ಲಿ ನಜ್ಜುಗುಜ್ಜಾದ ಕಾರಿಗೆ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಒಳಗಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಕುದಿಯುವ ಬೆಲ್ಲದ ಕೊಪ್ಪರಿಗೆಗೆ ಬಿದ್ದು ಉತ್ತರ ಪ್ರದೇಶದ ಯುವಕ ದಾರುಣ ಸಾವು
ಅಪಘಾತ ಕಂಡ ಕೂಡಲೇ ಸ್ಥಳೀಯ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಟಿಟಾವಿ ಠಾಣೆ ಪೊಲೀಸರು (Titawi Police) ಬೆಂಕಿ ನಂದಿಸಿ, ಕಾರಿನಲ್ಲಿದ್ದವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ರವಾನಿಸಿದರಾದರೂ, ಆಷ್ಟರಲ್ಲೇ ಕಾರಿನಲ್ಲಿದ್ದ ಆರTrigger ಆರೂ ಜನರು ಮೃತಪಟ್ಟಿದ್ದರು. ಅಪಘಾತದ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮಾಂತರ) ಅಕ್ಷಯ್ ಸಂಜಯ್ ಮಹಾಡಿಕ್, “ಮುಂಜಾನೆ 4.50ರ ಸುಮಾರಿಗೆ ಮುಜಫ್ಫರ್ನಗರ ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಮೃತರ ಗುರುತನ್ನು ಪತ್ತೆಹಚ್ಚುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅವರ ಕುಟುಂಬಸ್ಥರನ್ನು ಸಂಪರ್ಕಿಸಲು ಯತ್ನಿಸಲಾಗುತ್ತಿದೆ. ಸ್ಥಳದಲ್ಲಿ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆ ಸೌಹಾರ್ದಯುತವಾಗಿದೆ” ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


