ಬೆಂಗಳೂರು: ಹೊಸಪೇಟೆ ಮೂಲದ ರಾಜಕಾರಣಿಯೊಬ್ಬರ ವಿರುದ್ಧ ಅವರ ಪತ್ನಿ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಹಾಗೂ ಕ್ರೌರ್ಯ (Section 498A) ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಗೊಳಿಸಿದೆ ಸೂಕ್ತ ನಿರ್ದಿಷ್ಟ ಸಾಕ್ಷ್ಯಾಧಾರಗಳು ಮತ್ತು ಸ್ಪಷ್ಟ ವಿವರಣೆಗಳಿಲ್ಲದೆ ಕೇವಲ ಆಪಾದನೆಗಳನ್ನು ಮಾಡಿ ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ಸಲ್ಲಿಸುವುದು ಕಾಯ್ದೆಯ ಅಡಿಯಲ್ಲಿ ಅಪರಾಧ ಎನಿಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಎಮ್. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ದಂಪತಿಗಳು 2022ರ ಜನವರಿ 13ರಂದು ವಿವಾಹವಾಗಿದ್ದರು. ತದನಂತರ ದಾಂಪತ್ಯದಲ್ಲಿ ಬಿರುಕು ಮೂಡಿ ಪತ್ನಿ ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ 498A, 323, 504 ಮತ್ತು 506 ಐಪಿಸಿ ಅಡಿಯಲ್ಲಿ ದೂರು ನೀಡಿದ್ದರು. ಪೊಲೀಸರು ಪತಿಯ ವಿರುದ್ಧ ಮಾತ್ರ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ (ರಾಜಕಾರಣಿ), ತನ್ನ ಪತ್ನಿಯು ಈಗಾಗಲೇ 9 ಬಾರಿ ಮದುವೆಯಾಗಿದ್ದಾಳೆ ಹಾಗೂ ಆಕೆಯು ಹಣ ಪಡೆದುಕೊಳ್ಳುವ ದುರುದ್ದೇಶದಿಂದಲೇ ಸರಣಿ ದೂರುಗಳನ್ನು ನೀಡುವ ತಂತ್ರ ಅನುಸರಿಸುತ್ತಿದ್ದಾಳೆ ಎಂದು ದಾಖಲೆಗಳನ್ನು ಮಂಡಿಸಿದ್ದರು.

9ನೇ ಪತಿಯಿಂದ ಆಕೆ ಹಣಕ್ಕಾಗಿ 498A ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ ಕುರಿತು ನೀಡಲಾಗಿದ್ದ ಅಫಿಡವಿಟ್ ಅನ್ನು ಸಹ ಕೋರ್ಟ್ ಗಮನಕ್ಕೆ ತರಲಾಗಿತ್ತು. ಪತ್ನಿಯು ತಾನು ಹಿಂದಿನ ಮದುವೆಗಳಿಗೆ ಕಾನೂನಾತ್ಮಕವಾಗಿ ವಿಚ್ಛೇದನ (Divorce/Talaq/Khula) ಪಡೆದಿದ್ದು, ಪತಿಯಿಂದ ತನಗೆ ವರದಕ್ಷಿಣೆ ಕಿರುಕುಳವಾಗಿದೆ ಎಂದು ವಾದಿಸಿದ್ದರು.
ಪ್ರಕರಣದ ಕೂಲಂಕಷ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಎಮ್. ನಾಗಪ್ರಸನ್ನ ಅವರು ಕಟ್ಟುನಿಟ್ಟಿನ ಕಾನೂನು ಅಂಶಗಳನ್ನು ಸ್ಪಷ್ಟಪಡಿಸಿದ್ದಾರೆ. ದೂರಿನಲ್ಲಿ ಹಾಗೂ ಚಾರ್ಜ್‌ಶೀಟ್‌ನಲ್ಲಿ ‘ಕಿರುಕುಳ’, ‘ವರದಕ್ಷಿಣೆ ಬೇಡಿಕೆ’ ಅಥವಾ ‘ಕ್ರೌರ್ಯ’ ಎಂಬ ಜನರಲ್ ಪದಗಳನ್ನು ಬಳಸಲಾಗಿದೆಯೇ ಹೊರತು, ಯಾವ ದಿನ, ಯಾವ ಸಮಯದಲ್ಲಿ ಎಂತಹ ಕೃತ್ಯ ಎಸಗಲಾಗಿದೆ ಎಂಬ ಸ್ಪಷ್ಟ ಸಾಕ್ಷ್ಯ ಇಲ್ಲ.

ಇದನ್ನೂ ಓದಿ: ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ: ಸುಪ್ರೀಂ ಮಹತ್ವದ ತೀರ್ಪು
ಮಹಿಳೆಯೊಬ್ಬಳು ಎಷ್ಟು ಮದುವೆಯಾಗಿದ್ದಾಳೆ ಎಂಬ ಆಕೆಯ ವೈಯಕ್ತಿಕ ಇತಿಹಾಸವನ್ನು ಮಾತ್ರ ಆಧಾರವಾಗಿಟ್ಟುಕೊಂಡು ಆಕೆಯ ದೂರನ್ನು ತಳ್ಳಿಹಾಕಲು ಸಾಧ್ಯವಿಲ್ಲ. ದೂರಿನಲ್ಲಿ ನಿಜವಾದ ಅಪರಾಧ ನಡೆದಿದೆಯೇ ಇಲ್ಲವೇ ಎಂಬುದನ್ನು ಪ್ರತ್ಯೇಕವಾಗಿಯೇ ಪರಿಶೀಲಿಸಬೇಕು ಎಂದು ಪೀಠ ಸ್ಪಷ್ಟಪಡಿಸಿತು. ನಿರ್ದಿಷ್ಟ ಆಧಾರಗಳಿಲ್ಲದ ಸಾಧಾರಣ ದಾಂಪತ್ಯದ ಜಗಳಗಳನ್ನು 498A ಅಡಿಯಲ್ಲಿ ಕ್ರಿಮಿನಲ್ ಕೃತ್ಯ ಅಥವಾ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಚಾರ್ಜ್‌ಶೀಟ್ ಸಲ್ಲಿಸಿದ ತಕ್ಷಣವೇ ಯಾವುದೇ ತೂಕವಿಲ್ಲದ ಆರೋಪಕ್ಕೆ ಜೀವ ಬರಲು ಸಾಧ್ಯವಿಲ್ಲ ಎಂದು ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದೆ.

ಹೊಸಪೇಟೆಯ ರಾಜಕಾರಣಿ ಪರವಾಗಿ ವಕೀಲ ಸಿ. ಪರಮೇಶ್ವರಪ್ಪ, ರಾಜ್ಯ ಸರ್ಕಾರದ ಪರವಾಗಿ ಎಚ್‌ಸಿಜಿಪಿ ಕೆ. ನಾಗೇಶ್ವರಪ್ಪ ಮತ್ತು ದೂರುದಾರಳ ಪರವಾಗಿ ವಕೀಲ ಹಲೀಮಾ ಅಮೀನ್ ವಾದ ಮಂಡಿಸಿದ್ದರು.

