ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕೂಟೇಲು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ (ನವೆಂಬರ್ 10) ಕಾರು ಮತ್ತು ಮೋಟಾರ್ ಸೈಕಲ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಢಿಕ್ಕಿಯ ತೀವ್ರತೆಗೆ ಮೋಟಾರ್ ಸೈಕಲ್ ಏಕಾಏಕಿ ರಸ್ತೆಯಲ್ಲೇ ಹೊತ್ತಿ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ.
ಉಪ್ಪಿನಂಗಡಿ ಕಡೆಯಿಂದ ಪ್ರಯಾಣಿಸುತ್ತಿದ್ದ ಬೈಕ್ ಸವಾರನು ಒನ್ವೇ ದ್ವಿಪಥ ರಸ್ತೆಯಲ್ಲಿ ಏಕಾಏಕಿ ಲೇನ್ ಬದಲಾಯಿಸಲು ಯತ್ನಿಸಿದ್ದಾನೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಮೋಟಾರ್ ಸೈಕಲ್ಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಕಾರು ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ರಸ್ತೆಯ ಮೇಲೆಯೇ ಮಗುಚಿ ಬಿದ್ದಿದ್ದು, ಘಟನೆಯ ತೀವ್ರತೆಗೆ ವಾಹನದಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಮೈಸೂರು: ಭೀಕರ ರಸ್ತೆ ಅಪಘಾತ – ಖಾಸಗಿ ಸ್ಲೀಪರ್ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವು
ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿ ಬೆಂಕಿ ನಂದಿಸಲು ಯಾವುದೇ ತುರ್ತು ವ್ಯವಸ್ಥೆ ಅಥವಾ ನೀರು ಲಭ್ಯವಿಲ್ಲದ ಕಾರಣ, ಬೆಂಕಿ ಶೀಘ್ರವಾಗಿ ಹರಡಿ ಮೋಟಾರ್ ಸೈಕಲ್ ಬಹುತೇಕ ಸುಟ್ಟು ಕರಕಲಾಗಿದೆ. ಸ್ಥಳೀಯ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


