ಮಣಿಪಾಲ: ಶಿಕ್ಷಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಮಣಿಪಾಲದಲ್ಲಿ ದೀಪಾವಳಿ ಹಬ್ಬದ ನೆಪದಲ್ಲಿ ವಿದ್ಯಾರ್ಥಿಗಳ ಹಾಗೂ ಕಿಡಿಗೇಡಿಗಳ ಹುಚ್ಚಾಟ ಮಿತಿ ಮೀರಿದೆ. ಸಾರ್ವಜನಿಕ ಸ್ಥಳ ಹಾಗೂ ಜನನಿಬಿಡ ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೀವ್ರ ಆತಂಕ ಹಾಗೂ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಣಿಪಾಲದಲ್ಲಿ ಕಾನೂನು ಉಲ್ಲಂಘಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ, ಪೊಲೀಸರ ಭಯವೇ ಇಲ್ಲದಂತೆ ಕಿಡಿಗೇಡಿಗಳು ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಮಣಿಪಾಲದ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿರಂತರವಾಗಿರುವಾಗಲೇ, ವಿದ್ಯಾರ್ಥಿಗಳ ಗುಂಪೊಂದು ಉರಿಯುತ್ತಿರುವ ಪಟಾಕಿಗಳನ್ನು ಏಕಾಏಕಿ ರಸ್ತೆಯ ಮಧ್ಯಕ್ಕೆ ಎಸೆದು ಹುಚ್ಚಾಟ ಮೆರೆದಿದ್ದಾರೆ. ದ್ವಿಚಕ್ರ ವಾಹನ ಸವಾರರು ಹಾಗೂ ಹಾದಿಹೋಕರು ಪಟಾಕಿಗಳ ಅಬ್ಬರಕ್ಕೆ ಬೆಚ್ಚಿಬಿದ್ದಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಭಾರಿ ದುರಂತ ಸಂಭವಿಸುವ ಸಾಧ್ಯತೆಯಿತ್ತು.
ಈ ಹಿಂದೆ ಕಾಲೇಜು ಫೇರ್ವೆಲ್ ನೆಪದಲ್ಲೂ ಮಣಿಪಾಲದ ರಸ್ತೆಗಳಲ್ಲಿ ಇದೇ ರೀತಿಯ ಪುಂಡಾಟಿಕೆ ಕಂಡುಬಂದಿತ್ತು. ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದರೂ ಪೊಲೀಸರ ಕಡೆಯಿಂದ ಸೂಕ್ತ ತಡೆಗೋಡೆ ನಿರ್ಮಾಣವಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಇದನ್ನೂ ಓದಿ: ಬೆಳ್ತಂಗಡಿ: ಬೆಂಕಿ ಹಚ್ಚಿದ್ದ ಪಟಾಕಿ ಮೇಲೆ ಕಾಲಿಟ್ಟ ಯುವಕನ ಪಾದ ಛಿದ್ರ
“ಮಣಿಪಾಲದಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರುತ್ತಿದ್ದರೂ ಪೊಲೀಸರು ಯಾಕೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ? ಇನ್ನೊಬ್ಬರಿಗೆ ತೊಂದರೆ ಉಂಟುಮಾಡಿ, ಜೀವಕ್ಕೆ ಅಪಾಯ ತಂದೊಡ್ಡಿ ಸಂಭ್ರಮಿಸುವ ಅಗತ್ಯತೆ ಇದೆಯೇ?” ಎಂದು ಉಡುಪಿ ಹಾಗೂ ಮಣಿಪಾಲದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಸಾರ್ವಜನಿಕರ ಜೀವಕ್ಕೆ ಕಂಟಕ ತರುತ್ತಿರುವ ಇಂತಹ ಕಿಡಿಗೇಡಿ ವಿದ್ಯಾರ್ಥಿಗಳನ್ನು ತಕ್ಷಣವೇ ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


