ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನಿಗದಿಯಾಗಿದ್ದ ಅಂತಿಮ ಗಡುವನ್ನು ನವೆಂಬರ್ 30, 2026ರವರೆಗೆ ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ನವೆಂಬರ್ 10 ರವರೆಗೆ ಮಾತ್ರ ಸಮಯ ನೀಡಲಾಗಿತ್ತು. ಆದರೆ, ರಾಜ್ಯದ ಲಕ್ಷಾಂತರ ಪಡಿತರದಾರರ ಹಿತದೃಷ್ಟಿ ಹಾಗೂ ಅನುಕೂಲವನ್ನು ಪರಿಗಣಿಸಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಫಲಾನುಭವಿಗಳು ಯಾವುದೇ ತೊಂದರೆಯಿಲ್ಲದೆ ಇ-ಕೆವೈಸಿ ಪೂರ್ಣಗೊಳಿಸಲು ಇಲಾಖೆಯು ಎರಡು ಪ್ರಮುಖ ಅವಕಾಶಗಳನ್ನು ನೀಡಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ‘ಅನ್ನಸೇವೆ’ (Anna Seve) ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋದವರು ಈ ಆ್ಯಪ್ ಮೂಲಕವೇ ತಮ್ಮ ಇ-ಕೆವೈಸಿ ಮುಗಿಸಬಹುದು. ಆ್ಯಪ್ ಬಳಸಲು ಸಾಧ್ಯವಾಗದವರು ತಮ್ಮ ಹತ್ತಿರದ ನ್ಯಾಯಬೆಲೆ (ಪಡಿತರ) ಅಂಗಡಿಗೆ ತೆರಳಿಯೂ ಈ ಪ್ರಕ್ರಿಯೆಯನ್ನು ನೇರವಾಗಿ ಪೂರ್ಣಗೊಳಿಸಿಕೊಳ್ಳಬಹುದು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರತಿ 5 ವರ್ಷಕ್ಕೊಮ್ಮೆ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹಿರಿಯ ನಾಗರಿಕರು ಹಾಗೂ ಮಕ್ಕಳ ಬೆರಳಚ್ಚು ಸರಿಯಾಗಿ ಬೀಳದಿರುವ ಸಮಸ್ಯೆ ತಪ್ಪಿಸಲು ಆ್ಯಪ್ ಹಾಗೂ ಪಡಿತರ ಕೇಂದ್ರಗಳಲ್ಲಿ ಮುಖ ಗುರುತಿಸುವಿಕೆ ಸೌಲಭ್ಯವನ್ನೂ ಒದಗಿಸಲಾಗಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಆ್ಯಪ್ ಮೂಲಕ ಇ-ಕೆವೈಸಿ ಮಾಡುವ ಸಂಪೂರ್ಣ ಪ್ರಕ್ರಿಯೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಜಾಗೃತಿ ಮೂಡಿಸಿದ್ದಾರೆ.
ಇದನ್ನೂ ಓದಿ: ದೀಪಾವಳಿಗೆ ಉಚಿತ ಎಲ್ಪಿಜಿ ಸಿಲಿಂಡರ್: ಉ.ಪ್ರದೇಶದ 1.86 ಕೋಟಿ ಕುಟುಂಬಗಳಿಗೆ ಯೋಗಿ ಸರ್ಕಾರದಿಂದ ಬಂಪರ್ ಉಡುಗೊರೆ

ಅನ್ನಸೇವೆ ಆ್ಯಪ್ ಮೂಲಕ ಮನೆಯಲ್ಲೇ e-KYC ಮಾಡುವುದು ಹೇಗೆ?: Step-by-Step Guide
ಮೊಬೈಲ್ನಲ್ಲಿ ‘ಅನ್ನಸೇವೆ’ (Anna Seve) ಆ್ಯಪ್ ಡೌನ್ಲೋಡ್ ಮಾಡಿ ತೆರೆಯಿರಿ.
ಲಾಗಿನ್ ಪ್ರಕ್ರಿಯೆಯಲ್ಲಿ “ಸ್ವಯಂ/ನಾಗರಿಕ” (Self/Citizen) ಎಂಬ ಆಯ್ಕೆಯನ್ನು ನಮೂದಿಸಿ.

ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಹಾಗೂ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು (Ration Card No) ನಮೂದಿಸಿ.
ರೇಷನ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬಂದ OTP ಹಾಕಿ ಲಾಗಿನ್ ಆಗಿ.
ಸ್ಕ್ರೀನ್ನಲ್ಲಿ ಕುಟುಂಬದ ಸದಸ್ಯರ ಪಟ್ಟಿ ಕಾಣಿಸುತ್ತದೆ, ಇ-ಕೆವೈಸಿ ಮಾಡಬೇಕಾದ ಸದಸ್ಯರನ್ನು ಆಯ್ಕೆ ಮಾಡಿ.
ಕ್ಯಾಮೆರಾ ಮೂಲಕ ಆ್ಯಪ್ನ ಸೂಚನೆಯಂತೆ ಫೇಸ್ ರೆಕಗ್ನಿಷನ್ (Face Recognition) ಪೂರ್ಣಗೊಳಿಸಿ.
“ಇ-ಕೆವೈಸಿ ಯಶಸ್ವಿ” (e-KYC Successful) ಎಂಬ ಸಂದೇಶ ಬಂದ ತಕ್ಷಣ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.


