ಬಾಬ್ರಿ ಮಸೀದಿ ಕೆಡವಿದಾಗ ಕಣ್ಣೀರಿಟ್ಟಿದ್ದೆ ಎಂದ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ  ಅವರ ಆತ್ಮಕಥೆ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ ಮಂಗಳವಾರ ಬಿಡುಗಡೆಯಾಗಿದ್ದು, ಭಾರತೀಯ ರಾಜಕೀಯ ರಂಗದಲ್ಲಿ ಬೃಹತ್ ರಾಜಕೀಯ ಸಮರಕ್ಕೆ ಕಾರಣವಾಗಿದೆ. ತಮ್ಮ ವೈಯಕ್ತಿಕ ಜೀವನದ ದುರಂತಗಳು, ಕ್ಯಾನ್ಸರ್ ರೋಗದೊಂದಿಗಿನ ಹೋರಾಟ, 2004ರಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಿದ ರಹಸ್ಯ ಹಾಗೂ ಬಾಬ್ರಿ ಮಸೀದಿ ಕೆಡವಿದ ಘಟನೆಯಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳವರೆಗೆ ಸೋನಿಯಾ ಗಾಂಧಿ ಪುಸ್ತಕದಲ್ಲಿ ಹಲವು ಸ್ಪೋಟಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಬಾಬ್ರಿ ಮಸೀದಿ ಧ್ವಂಸಕ್ಕೆ ಕಣ್ಣೀರು: ತೀವ್ರ ಕಿಡಿಕಾರಿದ ಬಿಜೆಪಿ!

1992ರ ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸಗೊಂಡಾಗ ತಾವು ಟಿವಿಯಲ್ಲಿ ಅದನ್ನು ನೋಡಿ ಕಣ್ಣೀರಿಟ್ಟಿದ್ದಾಗಿ ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. “ಇದು ಆರ್‌ಎಸ್‌ಎಸ್-ಬಿಜೆಪಿ ವಿಭಜಕ ಅಜೆಂಡಾದ ಪರಾಕಾಷ್ಠೆಯಾಗಿತ್ತು” ಎಂದು ಅವರು ವಿಶ್ಲೇಷಿಸಿದ್ದಾರೆ. ಸೋನಿಯಾ ಗಾಂಧಿ ಅವರ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಮಾತನಾಡಿ, “ಈ ಪುಸ್ತಕಕ್ಕೆ ‘ಬೆಲಾಂಗಿಂಗ್’ ಬದಲು ‘ವೈಟ್‌ವಾಶಿಂಗ್’  ಎಂದು ಹೆಸರಿಡಬೇಕಿತ್ತು. ನೆಹರೂ-ಗಾಂಧಿ ಕುಟುಂಬ ಮಾಡಿದ ಐತಿಹಾಸಿಕ ತಪ್ಪುಗಳನ್ನು ಮುಚ್ಚಿಹಾಕಲು ಸೋನಿಯಾ ಯತ್ನಿಸಿದ್ದಾರೆ. 1984ರ ಸಿಖ್ ವಿರೋಧಿ ಗಲಭೆ ಅಥವಾ 26/11 ಮುಂಬೈ ದಾಳಿಯಾದಾಗ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರೇ?” ಎಂದು ಪ್ರಶ್ನಿಸಿದ್ದಾರೆ.

Advertisement

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಾತನಾಡಿ, “ಬಾಬ್ರಿ ಅಥವಾ ಬ್ಯಾಟ್ಲಾ ಹೌಸ್ ಎನ್‌ಕೌಂಟರ್ ನಡೆದಾಗ ಮಾತ್ರ ಸೋನಿಯಾ ಕಣ್ಣಿನಲ್ಲಿ ನೀರು ಬರುತ್ತದೆ, ಗೋಧ್ರಾ ಅಥವಾ ಪಹಲ್ಗಾಮ್‌ನಲ್ಲಿ ಹಿಂದೂ ಯಾತ್ರಿಕರ ಹತ್ಯೆಯಾದಾಗ ಅವರ ಕಣ್ಣೀರು ಒಣಗಿಹೋಗುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.  ಬಿಜೆಪಿಯ ಈ ವಾಗ್ದಾಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್ ಮತ್ತು ರಾಜೀವ್ ಶುಕ್ಲಾ, “ಬಾಬ್ರಿ ಮಸೀದಿ ಧ್ವಂಸವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿ ಅವರೇ ಕಟುವಾಗಿ ಖಂಡಿಸಿ, ಅದನ್ನೊಂದು ದೊಡ್ಡ ತಪ್ಪು ಎಂದಿದ್ದರು. ಹಾಗಾದರೆ ಅವರ ಹೃದಯದಲ್ಲೂ ಬಾಬರ್ ಇದ್ದನೇ?” ಎಂದು ಬಿಜೆಪಿಗೆ ನೇರ ಪ್ರಶ್ನೆ ಎಸೆದಿದ್ದಾರೆ.

ಇದನ್ನೂ ಓದಿ: ಅಂದು ನಾನು ಪ್ರಧಾನಿಯಾಗದಿರಲು ಆ ಇಬ್ಬರು ಕಾರಣ: ‘ಬಿಲಾಂಗಿಂಗ್’ ಪುಸ್ತಕದಲ್ಲಿ ರಾಜಕೀಯ ರಹಸ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

Advertisement

“ನನ್ನಿಷ್ಟದ ಭಾರತಕ್ಕೂ, ಮೋದಿಯವರ ಭಾರತಕ್ಕೂ ಅಂತರವಿದೆ”: ಸೈದ್ಧಾಂತಿಕ ಸಮರ

ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಸೋನಿಯಾ ಗಾಂಧಿ ಮುಕ್ತವಾಗಿ ಹಂಚಿಕೊಂಡಿದ್ದಾರೆ:  “ನನ್ನಿಷ್ಟದ ಭಾರತ ಹಾಗೂ ನರೇಂದ್ರ ಮೋದಿ ಅವರ ಭಾರತ ಸಂಪೂರ್ಣವಾಗಿ ಭಿನ್ನವಾಗಿವೆ. ಮೋದಿಯವರ ಭಾರತದ ಪರಿಕಲ್ಪನೆಯು ಆರ್‌ಎಸ್‌ಎಸ್ (RSS) ಸಿದ್ಧಾಂತದಿಂದ ಮೂಡಿಬಂದದ್ದು. ನನ್ನ ಭಾರತವು ಜಾತ್ಯತೀತತೆ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ನಿಂತಿದೆ” ಎಂದು ಸೋನಿಯಾ ಬರೆದಿದ್ದಾರೆ.

 ಮೋದಿ 12 ವರ್ಷಗಳಿಗೂ ಹೆಚ್ಚು ಕಾಲ ಪ್ರಧಾನಿಯಾಗಿದ್ದರೂ, ಸಂಸತ್ತಿನ ಅಧಿವೇಶನದ ಅಂತ್ಯದಲ್ಲಿ ಕೇವಲ ಔಪಚಾರಿಕ ವಂದನೆಗಳನ್ನು ಹೊರತುಪಡಿಸಿ ತಮ್ಮ ನಡುವೆ ಯಾವುದೇ ಅರ್ಥಪೂರ್ಣ ಮಾತುಕತೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ಸರ್ಕಾರವು ಇಡಿ (ED) ಯಂತಹ ತನಿಖಾ ಸಂಸ್ಥೆಗಳನ್ನು ರಾಜಕೀಯ ಸೇಡಿಗೆ ಬಳಸಿಕೊಳ್ಳುತ್ತಿದೆ ಹಾಗೂ ಚುನಾವಣಾ ಆಯೋಗ ಮತ್ತು ಕೆಲವು ಮಾಧ್ಯಮ ಸಂಸ್ಥೆಗಳು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಪುಸ್ತಕದಲ್ಲಿ 1984ರ ಆಪರೇಷನ್ ಬ್ಲೂ ಸ್ಟಾರ್, ತುರ್ತು ಪರಿಸ್ಥಿತಿ, 2002ರ ಗುಜರಾತ್ ಗಲಭೆ ಹಾಗೂ ಇಂದಿರಾ ಮತ್ತು ರಾಜೀವ್ ಗಾಂಧಿ ಹತ್ಯೆಯ ವೈಯಕ್ತಿಕ ನೋವುಗಳನ್ನು ಸೋನಿಯಾ ಗಾಂಧಿ ಸ್ಮರಿಸಿಕೊಂಡಿದ್ದಾರೆ.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ