ನವದೆಹಲಿ: 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಶೇ. 33ರಷ್ಟು ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವಾಗಿ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಸಂಸತ್ತಿನ ‘ವಿಶೇಷ ಅಧಿವೇಶನ’ ಕರೆಯಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮಸೂದೆ ಅಂಗೀಕಾರಕ್ಕೆ ಬೇಕಾದ ಮೂರನೇ ಎರಡರಷ್ಟು ಬಹುಮತಕ್ಕಿಂತ 15 ರಿಂದ 18 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಸರ್ಕಾರದ ಮೂಲಗಳು ವ್ಯಕ್ತಪಡಿಸಿವೆ. ಆದರೆ, ಉದ್ದೇಶಿತ ಅಧಿವೇಶನದ ದಿನಾಂಕ ಮತ್ತು ಅವಧಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.
543 ಸದಸ್ಯ ಬಲದ ಲೋಕಸಭೆಯಲ್ಲಿ ಪ್ರಸ್ತುತ 3 ಸ್ಥಾನಗಳು ಖಾಲಿ ಇವೆ. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಸರ್ಕಾರಕ್ಕೆ 361 ಮತಗಳ ಅಗತ್ಯವಿದೆ. ಏಪ್ರಿಲ್ 17ರಂದು ನಡೆದ ಬಜೆಟ್ ಅಧಿವೇಶನದ ವಿಶೇಷ ಕಲಾಪದಲ್ಲಿ ಇದೇ ರೀತಿಯ ಸಂವಿಧಾನ ತಿದ್ದುಪಡಿ ಮಸೂದೆಯು ಅಗತ್ಯ ಸಂಖ್ಯಾಬಲ ಸಿಗದೆ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಪಕ್ಕಾ ಲೆಕ್ಕಾಚಾರದೊಂದಿಗೆ ಸರ್ಕಾರ ಹೆಜ್ಜೆ ಇಡುತ್ತಿದೆ.

ಕ್ಷೇತ್ರ ಪುನರ್ವಿಂಗಡಣೆ ಮೂಲಕ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಪ್ರಸ್ತುತ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸಲು ಉದ್ದೇಶಿತ ತಿದ್ದುಪಡಿ ಪ್ರಸ್ತಾಪಿಸುತ್ತದೆ. ಇದರಿಂದ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ದಾರಿ ಸುಗಮವಾಗಲಿದೆ. ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಬಹುದು ಎಂಬ ಆತಂಕವನ್ನು ದೂರ ಮಾಡಲು, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. 1971ರ ಜನಗಣತಿಯ ಆಧಾರದ ಮೇಲೆ ಪ್ರಸ್ತುತ ಇರುವ ಅಂತರ-ರಾಜ್ಯ ಸ್ಥಾನಗಳ ಅನುಪಾತವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪ್ರಸ್ತಾವನೆಯೂ ಕರಡು ಮಸೂದೆಯಲ್ಲಿದೆ ಎನ್ನಲಾಗಿದೆ. (ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ). ಮತ್ತೊಂದೆಡೆ, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮುಂದಿನ 25 ವರ್ಷಗಳ ಕಾಲ ಯಥಾಸ್ಥಿತಿಯಲ್ಲಿ ಇರಿಸಿ, 2029ರಿಂದಲೇ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇದನ್ನೂ ಓದಿ: ಆಧಾರ್ ಬದಲು ವೋಟರ್ ಐಡಿ ಕಡ್ಡಾಯಕ್ಕೆ ಕೇಂದ್ರದ ಪ್ಲಾನ್

ಸಂಸತ್ತನ್ನು ಅಲ್ಪಾವಧಿಯ ನೋಟಿಸ್ನಲ್ಲಿ ಕರೆಯುವ ಸಾಧ್ಯತೆ ಮುಕ್ತವಾಗಿದೆ. ಏಕೆಂದರೆ, ಆಗಸ್ಟ್ 13ರಂದು ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದರೂ , ಮುಂಗಾರು ಅಧಿವೇಶನವನ್ನು ಇನ್ನೂ ಅಧಿಕೃತವಾಗಿ ಮುಕ್ತಾಯಗೊಳಿಸಿಲ್ಲ. ಮುಂಗಾರು ಅಧಿವೇಶನ ಮುಕ್ತಾಯಗೊಳ್ಳದೆ ಬರೋಬ್ಬರಿ 91 ದಿನಗಳು ಕಳೆದಿದ್ದು, 2008ರಲ್ಲಿ ನಿರ್ಮಾಣವಾಗಿದ್ದ 87 ದಿನಗಳ ಹಳೆಯ ದಾಖಲೆಯನ್ನು ಮುರಿದಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಸ್ತೃತ ಕಲಾಪ ಕರೆಯಲು ಕನಿಷ್ಠ 2 ದಿನಗಳ ನೋಟಿಸ್ ಸಾಕಾಗುತ್ತದೆ. ಅದೇ ಹೊಸ ಅಧಿವೇಶನ ಕರೆಯಲು ಕನಿಷ್ಠ 14 ದಿನಗಳ ನೋಟಿಸ್ ಅಗತ್ಯವಿರುತ್ತದೆ. ಅನಿರ್ದಿಷ್ಟಾವಧಿ ಮುಂದೂಡಿಕೆ ಬಳಿಕ ಸದನವನ್ನು ಮುಕ್ತಾಯಗೊಳಿಸಲು ಸಂವಿಧಾನದಲ್ಲಿ ನಿರ್ದಿಷ್ಟ ಕಾಲಮಿತಿಯಿಲ್ಲದ ಕಾರಣ, ಸರ್ಕಾರ ಈ ತಂತ್ರದ ಮೊರೆ ಹೋಗಿದೆ ಎನ್ನಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


