ಉಡುಪಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇಂದಿನಿಂದ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಕುಟುಂಬ ಸಮೇತರಾಗಿ ಇಂದು ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ನವಚಂಡಿಕಾ ಯಾಗದಲ್ಲಿ ಪಾಲ್ಗೊಂಡಿದ್ದಾರೆ. ಅನಾರೋಗ್ಯ, ಕುಟುಂಬದ ದೋಷ ಪರಿಹಾರ ಹಾಗೂ ಕಳೆದ ನಾಲ್ಕು ವರ್ಷಗಳಿಂದ ತೀರಿಸಲು ಸಾಧ್ಯವಾಗದ ಹರಕೆಯನ್ನು ಪೂರೈಸುವ ಹಿನ್ನೆಲೆಯಲ್ಲಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.
ಹಲವು ವರ್ಷಗಳಿಂದ ಮಾಡಬೇಕು ಎಂದುಕೊಂಡಿದ್ದ ನವಚಂಡಿಕಾ ಯಾಗದ ಧಾರ್ಮಿಕ ಪ್ರಕ್ರಿಯೆಗಳು ನಿನ್ನೆ (ನವೆಂಬರ್ 15) ಸಂಜೆಯಿಂದಲೇ ಕೊಲ್ಲೂರು ಕ್ಷೇತ್ರದಲ್ಲಿ ಆರಂಭಗೊಂಡಿವೆ. ಇಂದು ಮುಂಜಾನೆ ಎಚ್.ಡಿ. ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಅವರು ಪೂಜಾ ಸಂಕಲ್ಪ ಪೂರೈಸಿದ್ದು, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ಅವರೊಂದಿಗೆ ಯಾಗದಲ್ಲಿ ಭಾಗಿಯಾಗಿದ್ದಾರೆ. ಅರ್ಚಕರಾದ ಶ್ರೀಕಾಂತ್ ಅಡಿಗ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ನವಗ್ರಹ ಪೂಜೆಯ ಜೊತೆಗೆ ನವಚಂಡಿಕಾ ಯಾಗ ನಡೆಯುತ್ತಿದ್ದು, ಬೆಳಗ್ಗೆ 10 ಗಂಟೆ ಸುಮಾರಿಗೆ ಪೂರ್ಣಾಹುತಿ ನೆರವೇರಲಿದೆ.

ಇದನ್ನೂ ಓದಿ: ‘ಮಾತಾಡಿದ್ರೆ ಮುತ್ತು ಒಡೆದು ಹೋಗತ್ತೆ, ಸದ್ಯದಲ್ಲೇ ಡಿಕೆ ಶಿವಕುಮಾರ್ಗೆ ಸಾಡೇ ಸಾತಿ ಶನಿ ಕಾಟ!’
ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ನವಚಂಡಿಕಾ ಯಾಗದ ಪೂರ್ಣಾಹುತಿ ಮುಗಿದ ಬಳಿಕ, ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬ ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಹಾಗೂ ವಿಶೇಷ ಪೂಜೆ ಸಲ್ಲಿಸಲಿದೆ. ಕರಾವಳಿ ಟೆಂಪಲ್ ರನ್ನ ಎರಡನೇ ದಿನವಾದ ನಾಳೆ (ನವೆಂಬರ್ 17) ಕುಮಾರಸ್ವಾಮಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


