ಪಂಜಾಬ್​​ನಲ್ಲಿ ಈ ಬಾರಿ ಬಿಜೆಪಿ ಬರುವುದು ಖಂಡಿತ!: ಮತ್ತೆ ಒಂದಾದ ಹಳೆಯ ಸ್ನೇಹಿತರು; ಮೋದಿ ಎಕ್ಸ್​​ನಲ್ಲಿ ಹೇಳಿದ್ದೇನು?

ದೆಹಲಿ: ಪಂಜಾಬ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೃಷಿ ಕಾಯ್ದೆಗಳ ವಿಚಾರವಾಗಿ ಮೈತ್ರಿ ಕಡಿದುಕೊಂಡಿದ್ದ ಭಾರತೀಯ ಜನತಾ ಪಕ್ಷ (BJP) ಮತ್ತು ಶಿರೋಮಣಿ ಅಕಾಲಿದಳ (SAD) ಆರು ವರ್ಷಗಳ ಬಳಿಕ ಮತ್ತೆ ಒಂದಾಗಿವೆ. ಗುರು ಪರ್ವದ (Guru Purab) ಶುಭ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅಕಾಲಿದಳ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ಮೈತ್ರಿ ಘೋಷಿಸಿದ್ದಾರೆ.

“ಅಕಾಲಿದಳವೇ ದೊಡ್ಡಣ್ಣ, ಸಿಎಂ ಸ್ಥಾನ ಅವರಿಗೇ” – ಅಮಿತ್ ಶಾ ಘೋಷಣೆ:

Advertisement

ಹಳೆಯ ಮಿತ್ರನ ಮರುಸೇರ್ಪಡೆಗೆ ಹರ್ಷ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, “ಎನ್‌ಡಿಎಯ ಅತ್ಯಂತ ಹಳೆಯ ಮಿತ್ರಪಕ್ಷವಾದ ಅಕಾಲಿದಳ ಮತ್ತೆ ಎನ್‌ಡಿಎ ಮಡಿಲಿಗೆ ಮರಳಿರುವುದು ಅತೀವ ಸಂತಸದ ವಿಷಯವಾಗಿದೆ. ಬಾದಲ್ ಸಾಹೇಬರು ನಮ್ಮೊಂದಿಗೆ ದೀರ್ಘಕಾಲದ ಆಳವಾದ ಬಾಂಧವ್ಯ ಹೊಂದಿದ್ದರು. ಈ ಮೈತ್ರಿಯು ಪಂಜಾಬ್ ಮಾತ್ರವಲ್ಲದೆ ಇಡೀ ದೇಶ ಮತ್ತು ವಿಶ್ವದಾದ್ಯಂತ ಹಿಂದೂ-ಸಿಖ್ ಭ್ರಾತೃತ್ವದ ಸಂಕೇತವಾಗಲಿದೆ” ಎಂದು ಬಣ್ಣಿಸಿದರು.

ಸೀಟು ಹಂಚಿಕೆ ವಿವರಗಳನ್ನು ಇನ್ನೂ ಪ್ರಕಟಿಸದಿದ್ದರೂ, ಮೈತ್ರಿಯಲ್ಲಿ ಅಕಾಲಿದಳವೇ ‘ದೊಡ್ಡಣ್ಣ’ನಾಗಿ (Big Brother) ಮುಂದುವರಿಯಲಿದ್ದು, ಮುಖ್ಯಮಂತ್ರಿ ಸ್ಥಾನವೂ ಆ ಪಕ್ಷಕ್ಕೇ ಸಿಗಲಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. “ಬಡಾ ಭಾಯಿ ಹೀ ಚೀಫ್ ಮಿನಿಸ್ಟರ್ ಹೋತಾ ಹೈ (ದೊಡ್ಡಣ್ಣನೇ ಮುಖ್ಯಮಂತ್ರಿಯಾಗುತ್ತಾರೆ). ಎರಡೂ ಪಕ್ಷಗಳು ಒಟ್ಟಾಗಿ ಪಂಜಾಬ್‌ನ ಎಲ್ಲಾ 117 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ” ಎಂದು ಶಾ ಘೋಷಿಸಿದರು.

Advertisement

ಮಾದಕವಸ್ತು ಪಿಡುಗನ್ನು ನಿರ್ಮೂಲನೆ ಮಾಡಲು ಪ್ರಸ್ತುತ ಆಪ್ (AAP) ಸರ್ಕಾರ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರ ಏನನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ ಅಮಿತ್ ಶಾ, 2029ರ ಡಿಸೆಂಬರ್ ಒಳಗಾಗಿ ಪಂಜಾಬ್ ಅನ್ನು ‘ಡ್ರಗ್ಸ್ ಮುಕ್ತ’ ರಾಜ್ಯವನ್ನಾಗಿ ಮಾಡುವ ಭರವಸೆಯನ್ನು ಪುನರುಚ್ಚರಿಸಿದರು.

ಇದನ್ನೂ ಓದಿ: ಪುತ್ತೂರಿನ ಬಿಜೆಪಿಯಲ್ಲಿ ಅರುಣ್‌ ಕುಮಾರ್ ಪುತ್ತಿಲರಿಗೆ ಯಾಕಿಲ್ಲ ಮನ್ನಣೆ? ರಾಜಕೀಯದ ಒಳಸುಳಿ ಏನು?

Advertisement

“ಇದು ಸಹಜ ಮೈತ್ರಿ” – ಪ್ರಧಾನಿ ನರೇಂದ್ರ ಮೋದಿ ಸಂತಸ:

ಬಿಜೆಪಿ-ಅಕಾಲಿದಳ ಮೈತ್ರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

“ಪಂಜಾಬ್ ಮತ್ತು ಪಂಜಾಬಿಗಳ ಕಲ್ಯಾಣವೇ ನಮಗೆ ಮೊದಲು! ಶ್ರೀ ಗುರುನಾನಕ್ ದೇವ್ ಜೀ ಅವರ ಪ್ರಕಾಶ್ ಪರ್ವದ ದಿನದಂದೇ ಶಿರೋಮಣಿ ಅಕಾಲಿದಳ ಎನ್‌ಡಿಎ ಕುಟುಂಬಕ್ಕೆ ಮರಳಿರುವುದು ನನಗೆ ಅತೀವ ಸಂತೋಷ ತಂದಿದೆ. ನಮ್ಮದು ಸಹಜ ಮೈತ್ರಿಯಾಗಿದ್ದು, ಪಂಜಾಬ್‌ಗೆ ಜನಪರ ಆಡಳಿತ ನೀಡುವ ಮೂಲಕ ರಾಜ್ಯವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಅಟಲ್ ಜೀ, ಅಡ್ವಾಣಿ ಜೀ ಮತ್ತು ಸರ್ದಾರ್ ಪ್ರಕಾಶ್ ಸಿಂಗ್ ಬಾದಲ್ ಜೀ ಅವರಿಂದ ಪೋಷಿಸಲ್ಪಟ್ಟ ಈ ಮೈತ್ರಿ ಕಾಲದ ಪರೀಕ್ಷೆಯಲ್ಲಿ ಗೆದ್ದಿದೆ. ನಮ್ಮ ಮೈತ್ರಿ ಪಂಜಾಬ್ ಜನರ ಮೊದಲ ಆಯ್ಕೆಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ