ಉತ್ತರ ಪ್ರದೇಶ: ಬದೌನ್ ಜಿಲ್ಲೆಯ ಬಿನಾವರ್ (Binawar) ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದ್ದ ಮಹಿಳೆ ಹಾಗೂ ಆಕೆಯ 8 ವರ್ಷದ ಮೊಮ್ಮಗನ ಭೀಕರ ಜೋಡಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಜೀಮ್ ಅಲಿಯಾಸ್ ಅಜೀಮ್ (24) ಎಂಬ ಆರೋಪಿಯನ್ನು ಪೊಲೀಸರು ಇಂದು (ಮಂಗಳವಾರ) ಬಂಧಿಸಿದ್ದಾರೆ.
ನವೆಂಬರ್ 13ರ ರಾತ್ರಿ ನಡೆದಿದ್ದ ಘೋರ ದುರಂತವೇನು?

ಕಾನ್ಹಾ ನಗ್ಲಾ (Kanha Nagla) ನಿವಾಸಿಯಾದ ನಿಯಾಜ್ ಬಾನೋ (ಸುಮಾರು 50) ಎಂಬವರು ಮನೆಯಲ್ಲಿ ಒಬ್ಬರೇ ವಾಸವಿದ್ದರು. ನವೆಂಬರ್ 13ರ ಸಂಜೆ ತಮ್ಮ ಮಗಳು ಹೀನಾ ಅವರ 8 ವರ್ಷದ ಪುತ್ರ ಅಫ್ನಾನ್ ನನ್ನು ತಮ್ಮ ಮನೆಗೆ ಕರೆತಂದಿದ್ದರು. ನವೆಂಬರ್ 14ರ ಮುಂಜಾನೆ ಮಗಳು ಹೀನಾ ತಾಯಿಯ ಮನೆಗೆ ಚಹಾ ತೆಗೆದುಕೊಂಡು ಬಂದಾಗ, ನಿಯಾಜ್ ಬಾನೋ ಮತ್ತು ಬಾಲಕ ಅಫ್ನಾನ್ ಇಬ್ಬರೂ ಮೃತಪಟ್ಟಿರುವುದು ಕಂಡುಬಂದಿತ್ತು. ಇಬ್ಬರ ಕುತ್ತಿಗೆಯಲ್ಲೂ ಗಾಯದ ಗುರುತುಗಳಿದ್ದವು. ಈ ಕುರಿತು ನೂರ್ ಆಲಂ ನೀಡಿದ ದೂರಿನ ಮೇರೆಗೆ ಬಿನಾವರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(1) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.
ಪೊಲೀಸ್ ತನಿಖೆ & ಆರೋಪಿಯ ತಪ್ಪೊಪ್ಪಿಗೆಯಲ್ಲೇನಿದೆ?

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಂಗಳವಾರ ಬದೌನ್ನ ವಿಜಯ್ ನಗ್ಲಾ ಕ್ರಾಸ್ರೋಡ್ಸ್ ಬಳಿ ಕಾನ್ಹಾ ನಗ್ಲಾ ನಿವಾಸಿ ಅಜೀಮ್ (24) ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅಂಕಿತಾ ಶರ್ಮಾ ತಿಳಿಸಿದ್ದಾರೆ. ನವೆಂಬರ್ 13-14ರ ಮಧ್ಯರಾತ್ರಿ ಆರೋಪಿಯು ನಿಯಾಜ್ ಬಾನೋ ಅವರ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಆಕೆ ಪ್ರತಿರೋಧ ಒಡ್ಡಿ ಕೂಗಿಕೊಳ್ಳಲು ಮುಂದಾದಾಗ ಆರೋಪಿಯು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದೇ ವೇಳೆ ಕೊಠಡಿಯೊಳಗೆ ಬಂದ 8 ವರ್ಷದ ಬಾಲಕ ಅಫ್ನಾನ್ ಕೃತ್ಯವನ್ನು ನೋಡಿದ್ದರಿಂದ ಆತನನ್ನೂ ಆರೋಪಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವರ್ಗಾವಣೆ; ನೂತನ ಕಮಿಷನರ್ ಆಗಿ ಆರ್. ಹಿತೇಂದ್ರ ನೇಮಕ

ವಿಚಾರಣೆ ವೇಳೆ ಆರೋಪಿಯು ತನಗೆ ಬಾನೋ ಅವರ ಪರಿಚಯವಿದ್ದು, ಅವರ ಮನೆಗೆ ಬಂದು ಹೋಗುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಆಕೆಯೊಂದಿಗೆ ಸಂಬಂಧ ಬೆಳೆಸಲು ಬಯಸಿದ್ದಾಗಿ ತಿಳಿಸಿದ್ದು, ಈತ ದೆಹಲಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದು ಮಾದಕವಸ್ತು ವ್ಯಸನಿಯಾಗಿದ್ದಾನೆ ಎಂದು ಎಸ್ಎಸ್ಪಿ ಮಾಹಿತಿ ನೀಡಿದ್ದಾರೆ.

