ಸುಳ್ಯ: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಮತ್ತು ಆಚರಣೆಗಳನ್ನು ಉಳಿಸುವಂತೆ ದಕ್ಷಿಣ ಕನ್ನಡ ಜಿಲ್ಲೆ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಮಾಡಿದೆ.
ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಗಳಾಗಿ ಹಿಂದಿನಿಂದಲೂ ಪ್ರಚಲಿತದಲ್ಲಿರುವ ಕಂಬಳ, ಕೋಳಿ ಅಂಕ, ತೆಂಗಿನಕಾಯಿಯ ಕುಟ್ಟುವುದು ಮುಂತಾದ ಕ್ರೀಡೆಗಳು ತುಳುನಾಡಿನ ಜಾತ್ರೆ, ದೈವಕೋಲ ಮುಂತಾದ ಪರ್ವದಿನಗಳಲ್ಲಿ ಸಂಪ್ರದಾಯಬದ್ದವಾಗಿ ನಡೆಸಲ್ಪಡುವ ಕ್ರೀಡೆಗಳಾಗಿದೆ. ಇದನ್ನು ಜೂಜಾಟವೆಂಬಂತೆ ಬಿಂಬಿಸಿ ಸಾಂಪ್ರದಾಯಿಕ ಆಚರಣೆಗಳನ್ನು ಹತ್ತಿಕ್ಕುವುದು ನಮಗೆ ಅತೀವ ನೋವಿನ ಸಂಗತಿಯಾಗಿದೆ. ತುಳುನಾಡಿನ ಸಾಂಸ್ಕೃತಿಕ ಸೌಂದರ್ಯ ಉಳಿದುಕೊಳ್ಳಬೇಕಾದರೆ ಇಲ್ಲಿನ ಪ್ರತಿಯೊಂದು ಆಚರಣೆಗಳನ್ನು ಕೂಡ ಯಥಾಪ್ರಕಾರ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಮೇಲ್ನೋಟಕ್ಕೆ ಇವೆಲ್ಲ ಕ್ರೀಡೆಗಳಂತೆ ಕಂಡು ಬಂದರೂ ಇದರ ಹಿನ್ನೆಲೆಯಲ್ಲಿ ತಲೆ ಎತ್ತುವ ಗೂಡಂಗಡಿ, ಹೋಟೆಲ್, ತಂಪು ಪಾನೀಯ ಇತ್ಯಾದಿ ಅಂಗಡಿಗಳ ಮೂಲಕ ತಮ್ಮ ತಮ್ಮ ಹೊಟ್ಟೆಪಾಡಿಗಾಗಿ ಅದೆಷ್ಟೋ ಮಧ್ಯಮ ವರ್ಗದ ವ್ಯಾಪಾರಿಗಳು ಬದುಕನ್ನು ಕೂಡ ಕಟ್ಟಿಕೊಂಡಿದ್ದಾರೆ. ಈ ಕ್ರೀಡೆಗಳನ್ನು ಹತ್ತಿಕ್ಕಿದರೆ ಅದೆಷ್ಟೋ ಮಧ್ಯಮ ವರ್ಗದವರ ದುಡಿಮೆಯನ್ನು ಕಿತ್ತುಕೊಂಡಂತಾಗುತ್ತದೆ.
ಇದನ್ನೂ ಓದಿ: ಜಂಪ್ ರೋಪ್ ಸ್ಪರ್ಧೆ: ಕೊಯಿಲ ಸರ್ಕಾರಿ ಶಾಲೆಯ ರಂಜನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮಾಮೂಲಿ ದಿನಗಳಲ್ಲಿ ಈ ಕ್ರೀಡೆಗಳಿಗೆ ಅವಕಾಶ ಕೊಡದಿದ್ದರೂ ತುಳುನಾಡಿನ ಜಾತ್ರೆ, ನೇಮೋತ್ಸವ ಮುಂತಾದ ಪರ್ವದಿನಗಳಲ್ಲಿ ಕಾನೂನಿನ ಚೌಕಟ್ಟಿನೊಳಗೆ ಈ ಸಾಂಪ್ರದಾಯಿಕ ಕ್ರೀಡೆಗೆ ಅವಕಾಶ ಕಲ್ಪಿಸಿಕೊಡಬೇಕು.
ಪ್ರತಿಯೊಂದು ತಾಲೂಕಿನಲ್ಲಿಯೂ ಒಂದೊಂದು ಐತಿಹಾಸಿಕ ದೈವಸ್ಥಾನಗಳಿದ್ದು ಈ ದೈವಸ್ಥಾನಗಳ ಸಂಪ್ರದಾಯ ಹಾಗೂ ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ವ ರಾಜಕೀಯ ಪಕ್ಷಗಳು ಒಂದಾಗಿ ಪಕ್ಷಬೇಧ ಮರೆತು ರಾಜಕೀಯ ಹಿತಾಸಕ್ತಿಗಳನ್ನು ಬದಿಗೊತ್ತಿ ತಮ್ಮ ಕ್ಷೇತ್ರದ ಪ್ರಸಿದ್ಧ ಹಾಗೂ ಕಾರಣಿಕ ದೈವಸ್ಥಾನದ ಸಂಪ್ರದಾಯದಂತೆ ನಡೆದುಕೊಂಡು ಬಂದ ಕ್ರೀಡೆ ಮತ್ತು ಆಚರಣೆಗಳಿಗೆ ಯಾವುದೇ ತೊಡಕಾಗದಂತೆ ನಡೆಸಲು ಅಧಿಕಾರಿ ವರ್ಗಕ್ಕೆ ಸಂಪ್ರದಾಯವನ್ನು ಮನವರಿಕೆ ಮಾಡಿ ಆದೇಶ ನೀಡಬೇಕಾಗಿ ಮನವಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

