ಬಂಟ್ವಾಳ: ತಾಲೂಕಿನ ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಕನ್ನಡ ಭಾಷಾ ವಿಭಾಗದ ವತಿಯಿಂದ ಐಕ್ಯೂಎಸಿ ಸಹಯೋಗದಲ್ಲಿ ಫೆ.2ರಂದು “ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರಭಾವದ ಪ್ರತಿಬಂಬ”ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಸಾವಿರಾರು ವರ್ಷಗಳ ಇತಿಹಾಸ ಇರುವ ನಮ್ಮ ಭಾರತ ಸನಾತನವೂ, ನಿತ್ಯನೂತನವೂ ಆಗಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿಯೂ ನಮ್ಮತನದ ಬೀಜವನ್ನು ಬಿತ್ತಿದ ದೇಶ ಭಾರತ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಯಲ್ಲಿಯೂ ರಾಷ್ಟ್ರಭಾವದ ಜಾಗೃತಿಯಾಗುವುದರಿಂದ ಮಾತ್ರವೇ ಭಾರತದ ಪುನರುತ್ಥಾನ ಸಾಧ್ಯ ಎಂದರು.


ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಆಧ್ಯಾತ್ಮಿಕ ಚಿಂತಕರೂ, ಭಗವದ್ಗೀತಾ ವ್ಯಾಖ್ಯಾನಕಾರರೂ, ಕನ್ನಡ ಚಂದನ ವಾಹಿನಿಯ “ಸತ್ಯದರ್ಶನ” ಖ್ಯಾತಿಯ ಡಾ. ಪಾವಗಡ ಪ್ರಕಾಶ್ ರಾವ್ ಹಾಗೂ ಅವರ ಧರ್ಮಪತ್ನಿ ಕಲ್ಪನಾ ರಾನಡೆ ಅವರು ದೀಪ ಬೆಳಗಿಸುವ ಮೂಲಕ ವಿಚಾರಸಂಕಿರಣವನ್ನು ಉದ್ಘಾಟಿಸಿ “ರಾಮ ಮತ್ತು ರಾಷ್ಟ್ರ” ಎಂಬ ವಿಚಾರವಾಗಿ ಮೊದಲ ಗೋಷ್ಠಿಯನ್ನು ನಡೆಸಿಕೊಟ್ಟರು.

ಇದನ್ನೂ ಓದಿ: ಜಂಪ್ ರೋಪ್ ಸ್ಪರ್ಧೆ: ಕೊಯಿಲ ಸರ್ಕಾರಿ ಶಾಲೆಯ ರಂಜನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ವಿಚಾರ ಸಂಕಿರಣದ ಎರಡನೇ ಗೋಷ್ಠಿಯನ್ನು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಖ್ಯಾತ ವಾಗ್ಮಿ ಹಾಗೂ ಅಂಕಣಕಾರರಾದ ಡಾ. ರೋಹಿಣಾಕ್ಷ ಶಿರ್ಲಾಲು ಇವರು “ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯ ಪ್ರಜ್ಞೆ” ಎಂಬ ವಿಚಾರವಾಗಿ ನಡೆಸಿಕೊಟ್ಟರು.

ಕನ್ನಡ ವಿಭಾಗ ಮುಖ್ಯಸ್ಥರೂ ಆಗಿರುವ ಉಪಪ್ರಾಂಶುಪಾಲ ಯತಿರಾಜ್ ಪೆರಾಜೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಗಣ್ಯರನ್ನು ಸ್ವಾಗತಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿ ಸಂಪೂರ್ಣ ಸಹಕಾರ ನೀಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾಲೇಜು ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು. ಪ್ರಣಮ್ಯ ವಂದಿಸಿ, ಕು. ತನುಶ್ರೀ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

