ಉಪ್ಪಿನಂಗಡಿ: ಇಲ್ಲಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಒನ್-ವೇ (ಏಕಮುಖ ಸಂಚಾರ) ರಸ್ತೆಯಲ್ಲಿ ರಿಕ್ಷಾ ವಿರುದ್ಧ ದಿಕ್ಕಿನಿಂದ ಬಂದಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಪುತ್ತೂರು ಕಡೆಯಿಂದ ಉಪ್ಪಿನಂಗಡಿಗೆ ಬರುತ್ತಿದ್ದ ನೆಕ್ಸೋನ್ ಕಾರು ಸರ್ವಿಸ್ ರಸ್ತೆಗೆ ಪ್ರವೇಶಿಸುತ್ತಿದ್ದಂತೆ, ಎದುರಿನಿಂದ ಅತೀ ವೇಗವಾಗಿ ಬಂದ ರಿಕ್ಷಾ ಡಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿ ಶಾಲಾ ಮಕ್ಕಳಿದ್ದು, ಡಿಕ್ಕಿಯ ರಭಸಕ್ಕೆ ಇಬ್ಬರು ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಾಯಗೊಂಡ ಮಕ್ಕಳನ್ನು ತಕ್ಷಣವೇ ಸ್ಥಳೀಯರ ಸಹಾಯದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಉಪ್ಪಿನಂಗಡಿ: ಕಾರು-ಬೈಕ್ ನಡುವೆ ಭೀಕರ ಡಿಕ್ಕಿ; ಸಹಕಾರಿ ಸಂಘದ ಹಿರಿಯ ಗುಮಾಸ್ತ ದುರ್ಮರಣ
ಸರ್ವಿಸ್ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ರಿಕ್ಷಾ ಬಂದಿದ್ದರಿಂದ ಈ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

