ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಟ್ಯಾಂಕರ್‌ಗಳಿಗೆ ಸುರಕ್ಷಿತ ಸಾಗಾಟಕ್ಕೆ ಇರಾನ್ ಒಪ್ಪಿಗೆ, ಆದರೆ….

ನವದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ, ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜದ ತೈಲ ಟ್ಯಾಂಕರ್‌ಗಳಿಗೆ ಸುರಕ್ಷಿತವಾಗಿ ಸಾಗಾಟ ಮಾಡಲು ಇರಾನ್ ಒಪ್ಪಿಗೆ ನೀಡಿದೆ ಎಂಬ ಮಾಹಿತಿ ಭಾರತೀಯ ಸರ್ಕಾರದ ಮೂಲಗಳಿಂದ ಹೊರಬಂದಿದೆ. ಆದರೆ ಇಂತಹ ಯಾವುದೇ ಒಪ್ಪಂದವಾಗಿಲ್ಲ ಎಂದು ಇರಾನ್ ಮೂಲಗಳು ತಿಳಿಸಿದ್ದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಭಾರತದ ಒಟ್ಟು ಕಚ್ಚಾ ತೈಲ ಆಮದುಗಳಲ್ಲಿ ಸುಮಾರು ೪೦ ಶೇಕಡಾ ಭಾಗ ಹೋರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಜಲಸಂಧಿಯ ಭದ್ರತೆ ಭಾರತದ ಇಂಧನ ಭದ್ರತೆಗೆ ಅತ್ಯಂತ ಮಹತ್ವದ್ದಾಗಿದೆ.

Advertisement

ಮಂಗಳವಾರ ರಾತ್ರಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಇರಾನ್ ವಿದೇಶಾಂಗ ಸಚಿವ ಸೇಯ್ಯದ್ ಅಬ್ಬಾಸ್ ಅರಾಘ್ಚಿ ನಡುವಿನ ದೂರವಾಣಿ ಮಾತುಕತೆಯ ಬಳಿಕ, ಭಾರತೀಯ ಧ್ವಜದ ಹಡಗುಗಳಿಗೆ ಸುರಕ್ಷಿತವಾಗಿ ಸಾಗಲು ಇರಾನ್ ಭರವಸೆ ನೀಡಿದೆ ಎಂದು ಭಾರತೀಯ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಭಾರತಕ್ಕೆ ಬರುತ್ತಿದೆ ಎಂದು ನಂಬಲಾಗಿರುವ ಎರಡು ವಿದೇಶಿ ಧ್ವಜದ ತೈಲ ಟ್ಯಾಂಕರ್‌ಗಳು ಹೋರ್ಮುಜ್ ಜಲಸಂಧಿ ಮೂಲಕ ಸಾಗಿರುವುದಾಗಿ ಹೇಳಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

ಇನ್ನೊಂದೆಡೆ, ಮಾತುಕತೆ ಕುರಿತು ಇರಾನ್ ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಯಲ್ಲಿ ಅಮೆರಿಕವನ್ನು ಗಲ್ಫ್ ಪ್ರದೇಶದಲ್ಲಿ ಉಂಟಾದ ಅಸುರಕ್ಷಿತ ಪರಿಸ್ಥಿತಿಗೆ ಹೊಣೆಗಾರ ಎಂದು ಆರೋಪಿಸಲಾಗಿದೆ. ಆದರೆ ಭಾರತೀಯ ಹಡಗುಗಳಿಗೆ ಸುರಕ್ಷಿತ ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದದ ಬಗ್ಗೆ ಉಲ್ಲೇಖ ಮಾಡಲಾಗಿಲ್ಲ.

ಇದೀಗ ಹೋರ್ಮುಜ್ ಜಲಸಂಧಿಯ ಎರಡೂ ದಿಕ್ಕುಗಳಲ್ಲಿ 28 ಭಾರತೀಯ ಧ್ವಜದ ಹಡಗುಗಳು ಸಂಚರಿಸುತ್ತಿದ್ದು, ಅವುಗಳಲ್ಲಿ 778 ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಭಾರತ ಸರ್ಕಾರ ತಿಳಿಸಿದೆ.

ಇದೇವೇಳೆ ಇರಾನ್-ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧ ಆರಂಭವಾದ ನಂತರ ಇರಾನ್ ಕನಿಷ್ಠ 16 ಹಡಗುಗಳ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಬುಧವಾರ ಭಾರತಕ್ಕೆ ಬರುತ್ತಿದ್ದ ಥೈಲ್ಯಾಂಡ್ ಹಡಗೊಂದರ ಮೇಲೂ ದಾಳಿ ನಡೆದಿದ್ದು, ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಹೋರ್ಮುಜ್ ಜಲಸಂಧಿಯ ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ, ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಕೆದಾರ ದೇಶವಾಗಿರುವ ಭಾರತ ಇದೀಗ ರಷ್ಯಾ ಸೇರಿದಂತೆ ಇತರ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.

News Source : Reuters

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು