ಬೆಂಗಳೂರು: ನಗರದ ವಿದ್ಯುತ್ ಪೂರೈಕೆಗೆ ಬ್ಯಾಕಪ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಲಹಂಕ ಗ್ಯಾಸ್ ಆಧಾರಿತ ವಿದ್ಯುತ್ ಘಟಕ ಗ್ಯಾಸ್ ಸರಬರಾಜು ಕೊರತೆಯಿಂದ ಕಾರ್ಯಾಚರಣೆ ನಿಲ್ಲಿಸಿರುವುದು ಆತಂಕ ಮೂಡಿಸಿದೆ.
ಡಿಸೆಂಬರ್‌ನಿಂದ ಏಪ್ರಿಲ್ ನಡುವೆ ನಗರದಲ್ಲಿ ಹೆಚ್ಚಾಗುವ ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಲು ಪ್ರಮುಖವಾಗಿ ಬಳಸಲಾಗುತ್ತಿದ್ದ ಈ ಘಟಕಕ್ಕೆ ಭಾರತೀಯ ಅನಿಲ ಪ್ರಾಧಿಕಾರ ಲಿಮಿಟೆಡ್(GAIL) ಸಂಸ್ಥೆ ಗ್ಯಾಸ್ ಪೂರೈಕೆಯನ್ನು ಸ್ಥಗಿತಗೊಳಿಸಿರುವುದರಿಂದ ಘಟಕ ಕಾರ್ಯಾಚರಣೆ ನಿಂತಿದೆ ಎಂದು ವರದಿಗಳು ತಿಳಿಸಿವೆ.

ರಾಜ್ಯದ ಮೊದಲ ಗ್ಯಾಸ್ ಆಧಾರಿತ ವಿದ್ಯುತ್ ಘಟಕವಾಗಿರುವ ಯೆಲಹಂಕ ಘಟಕವು ಸೆಪ್ಟೆಂಬರ್ 2024ರಿಂದ ದಿನಕ್ಕೆ ಸುಮಾರು 370 ಮೆಗಾವಾಟ್ ವಿದ್ಯುತ್ ಉತ್ಪಾದಿಸಿ ಬೆಂಗ್ಳೂರಿನ ಗ್ರಿಡ್‌ಗೆ ಪೂರೈಸುತ್ತಿತ್ತು. ಆದರೆ ಮಾರ್ಚ್ 12ರಂದು ಬೆಳಗ್ಗೆ 6 ಗಂಟೆಯಿಂದ ಗ್ಯಾಸ್ ಸರಬರಾಜು ಸಂಪೂರ್ಣವಾಗಿ ನಿಲ್ಲಿಸಲ್ಪಟ್ಟ ಕಾರಣ ಘಟಕವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ ವಾರವೂ ವಿದ್ಯುತ್ ವ್ಯತ್ಯಯ
ಇದಕ್ಕೂ ಮೊದಲು ಕಳೆದ ವಾರ ಕೆಲವು ಪ್ರದೇಶಗಳಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ವಿದ್ಯುತ್ ವ್ಯತ್ಯಯ ಮಾಡಿತ್ತು. ಈಗ ಯೆಲಹಂಕ ಘಟಕ ಬಂದ್ ಆಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ತಕ್ಷಣ ವಿದ್ಯುತ್ ಕಡಿತ ಸಾಧ್ಯತೆ ಇಲ್ಲ
ಅಧಿಕಾರಿಗಳ ಪ್ರಕಾರ ಯೆಲಹಂಕ ಘಟಕ ಬಂದ್ ಆದರೂ ಬೆಂಗಳೂರಿನಲ್ಲಿ ತಕ್ಷಣ ವಿದ್ಯುತ್ ಕೊರತೆ ಉಂಟಾಗುವುದಿಲ್ಲ. ನಗರಕ್ಕೆ ಅಗತ್ಯವಿರುವ ವಿದ್ಯುತ್ ಅನ್ನು ಇತರೆ ಥರ್ಮಲ್, ಹೈಡಲ್ ಘಟಕಗಳು ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ ಪೂರೈಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು ಜನರ ಗಮನಕ್ಕೆ ಈ ಹೋಟೆಲ್ನಲ್ಲಿ ಮಧ್ಯಾಹ್ನದ ಊಟ ಇರುವುದಿಲ್ಲ
ಬೆಸ್ಕಾಂ ಅಧಿಕಾರಿಯೊಬ್ಬರ ಪ್ರಕಾರ, ಬೇಸಿಗೆ ಕಾಲದಲ್ಲಿ ಸೌರ ಮತ್ತು ಗಾಳಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವುದರಿಂದ ನಗರ ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಲು ಸಾಧ್ಯವಾಗಲಿದೆ.
ಇರಾನ್–ಅಮೆರಿಕ ಉದ್ವಿಗ್ನತೆಯ ಪರಿಣಾಮ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ, ಇಸ್ರೇಲ್ ನಡುವಿನ ಯುದ್ಧ ಹಿನ್ನೆಲೆಯಲ್ಲಿ ಹೊರ್ಮಜ್ ಜಲಸಂಧಿ ಮೂಲಕ ನಡೆಯುವ ಕಚ್ಚಾ ತೈಲ ಮತ್ತು ಗ್ಯಾಸ್ ಸರಬರಾಜು ವ್ಯತ್ಯಯಗೊಂಡಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಗ್ಯಾಸ್ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿದೆ.
ಇದರಿಂದ ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ (ಪೂರೈಕೆ ನಿಯಂತ್ರಣ) ಆದೇಶ 2026 ಅನ್ವಯ ಗ್ಯಾಸ್ ಹಂಚಿಕೆಗೆ ಆದ್ಯತೆ ಕ್ರಮ ಜಾರಿಗೊಳಿಸಿದ್ದು, ಪೈಪ್ ಗ್ಯಾಸ್ (PNG), LPG ಉತ್ಪಾದನೆ, ಸಾರಿಗೆಗಾಗಿ ಬಳಸುವ CNG ಹಾಗೂ ಅವಶ್ಯಕ ಪೈಪ್‌ಲೈನ್ ಕಾರ್ಯಾಚರಣೆಗಳಿಗೆ ಮೊದಲು ಗ್ಯಾಸ್ ನೀಡಲು ಸೂಚಿಸಿದೆ.
ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ
ಪ್ರಸ್ತುತ ಕರ್ನಾಟಕದಲ್ಲಿ ದಿನಕ್ಕೆ ಸುಮಾರು 355 ಮಿಲಿಯನ್ ಯುನಿಟ್ ವಿದ್ಯುತ್ ಬೇಡಿಕೆ ಇದೆ. ಈ ಬೇಡಿಕೆಯನ್ನು ಥರ್ಮಲ್, ಹೈಡಲ್, ಸೌರ ಹಾಗೂ ಗಾಳಿ ವಿದ್ಯುತ್ ಜೊತೆಗೆ ಕೇಂದ್ರ ಗ್ರಿಡ್‌ನಿಂದ ಪಡೆಯುವ ವಿದ್ಯುತ್ ಮೂಲಕ ಪೂರೈಸಲಾಗುತ್ತಿದೆ.
ಆದರೆ ಯೆಲಹಂಕ ಗ್ಯಾಸ್ ಘಟಕ ಮುಂದುವರೆದರೂ ಬಂದ್ ಆಗಿ ಉಳಿದರೆ, ಕೆಲವು ಜಿಲ್ಲೆಗಳಲ್ಲಿ ಭವಿಷ್ಯದಲ್ಲಿ ವಿದ್ಯುತ್ ನಿರ್ವಹಣೆ ಸವಾಲಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

