ಮಂಗಳೂರು: ಯೆನೆಪೊಯಾ ಮೆಡಿಕಲ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಅಪರೂಪದ ವೈದ್ಯಕೀಯ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ದಾಖಲಿಸಲಾಗಿದೆ.
25 ವರ್ಷದ ಗರ್ಭಿಣಿ 38 ವಾರ 3 ದಿನಗಳ ಗರ್ಭಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಹಿಳೆಗೆ ಮೊದಲೇ ಲೋಯರ್ ಸೆಗ್ಮೆಂಟ್ ಸೀಸೇರಿಯನ್ ಸೆಕ್ಷನ್ (LSCS) ಆಗಿದ್ದ ಹಿನ್ನೆಲೆ, ವೈದ್ಯರು ವಿಶೇಷ ಗಮನಹರಿಸಿ ಫೆಬ್ರವರಿ 27 ರಂದು ಯೋಜಿತ ಸೀಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದರು.

ಈ ಶಸ್ತ್ರಚಿಕಿತ್ಸೆಯ ಮೂಲಕ 5.1 ಕೆಜಿ ತೂಕದ ಆರೋಗ್ಯವಂತ ಹೆಣ್ಣು ಮಗು ಜನಿಸಿದೆ. ಸಾಮಾನ್ಯವಾಗಿ ಇಷ್ಟೊಂದು ತೂಕದ ಮಗು ಜನಿಸುವುದು ಅಪರೂಪವಾಗಿದ್ದು, ವಿಶೇಷವಾಗಿ ಡಯಾಬಿಟಿಸ್ ಇಲ್ಲದ ಗರ್ಭಿಣಿಯರಲ್ಲಿ ಇಂತಹ ‘ಫೀಟಲ್ ಮ್ಯಾಕ್ರೋಸೋಮಿಯಾ’ ಪ್ರಕರಣಗಳು ವಿರಳ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಜಾಗ ಗುರುತಿಸಿ ಆಗಿದೆ, ಮೆಡಿಕಲ್ ಕಾಲೇಜು ಸ್ಥಾಪಿಸಿ: ರಾಜ್ಯ ಸರ್ಕಾರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಈ ಶಸ್ತ್ರಚಿಕಿತ್ಸೆಯನ್ನು ಡಾ. ಸಾಧಿಕ್ ಉನ್ನಿಸಾ ಎ (ಯುನಿಟ್ ಮುಖ್ಯಸ್ಥೆ) ಅವರ ನೇತೃತ್ವದಲ್ಲಿ ಡಾ. ರೇಷ್ಮಾ ಆನ್ ಮ್ಯಾಥ್ಯೂ, ಡಾ. ಅಖಿಲಾ ಎಲ್.ಪಿ ಮತ್ತು ಡಾ. ಡೆನಿಯಾ ಮೇರಿ ಎಲ್ಧೋ ಅವರು ಯಶಸ್ವಿಯಾಗಿ ನಡೆಸಿದರು. ಇದಕ್ಕೆ ಜೊತೆಗೆ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಜಸಿನಾ ಮತ್ತು ಡಾ. ವಿಷ್ಣುಪ್ರಿಯಾ ಸಹಕಾರ ನೀಡಿದರು.
ಅನಸ್ಥೀಷಿಯಾ ತಂಡದ ಡಾ. ಅಲಿಫ್ ಶಾಪಿ ಮತ್ತು ಡಾ. ಅಜಾಝ್ ಅಹಮದ್ ಝಡ್ ಹಾಗೂ ಪೀಡಿಯಾಟ್ರಿಕ್ಸ್ ತಂಡವೂ ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ಪ್ರಮುಖ ಪಾತ್ರ ವಹಿಸಿತು.
ಈ ಅಪರೂಪದ ಮತ್ತು ಸವಾಲಿನ ಪ್ರಸವವನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಯೆನೆಪೊಯಾ ಮೆಡಿಕಲ್ ಕಾಲೇಜಿನ ವೈದ್ಯಕೀಯ ಪರಿಣಿತಿ ಮತ್ತು ಬಹುಶಾಖಾ ತಂಡದ ಸಮನ್ವಯದ ಫಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ತಾಯಿ ಮತ್ತು ಶಿಶುಗಳ ಆರೈಕೆಯಲ್ಲಿ ಉನ್ನತ ಮಟ್ಟದ ವೈದ್ಯಕೀಯ ಸೇವೆ ನೀಡುವ ಸಂಸ್ಥೆಯ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

