Breaking News

‘ಮಲಯಾಳಂ ಭಾಷಾ ಮಸೂದೆ 2025’ ನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿದ ಸಿದ್ದರಾಮಯ್ಯ

ಬೆಂಗಳೂರು: ಕೇರಳ ಸರ್ಕಾರ ಕಾರ್ಯರೂಪಕ್ಕೆ ತರಲು  ಮುಂದಾಗಿರುವ ‘ಮಲಯಾಳಂ ಭಾಷಾ ಮಸೂದೆ 2025’ರಿಂದ ಕೇರಳ  ಕರ್ನಾಟಕದ ಗಡಿ ಪ್ರದೇಶವಾದ ಕಾಸರಗೋಡಿನ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗಲಿದ್ದು, ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೇರಳ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರುವ ಸಿದ್ದರಾಮಯ್ಯ, ಒಂದು ವೇಳೆ ಕಾಸರಗೋಡು ಕನ್ನಡಿಗರ ಹಿತ ನಿರ್ಲಕ್ಷಿಸಿ ಅವರ ಮೇಲೆ ಭಾಷೆಯನ್ನು ಹೇರಿದ್ದೇ ಆದಲ್ಲಿ ನಮ್ಮ ಸರ್ಕಾರ ಅವರ ಜತೆಯಲ್ಲಿ ನಿಂತು ವಿವಿಧ ರೀತಿಯ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸಲಿರುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲಯಾಳ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗುತ್ತಾರೆ.

Advertisement

ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ  ಕೂಡ  ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಬೆರೆತಿದ್ದಾರೆ.ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದ್ದು,  ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತ  ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ :Bangalore : B-ಖಾತಾ ಆಸ್ತಿಗಳಿಗೆ A-ಖಾತಾ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ

ಕಾಸರಗೋಡಿನ ಜನ ಹಲವು ತಲೆಮಾರುಗಳಿಂದ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದು,  ಕನ್ನಡವನ್ನು ಬದುಕಿನಲ್ಲಿ ಅಳವಡಿಸುತ್ತಾ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಬದುಕಿನಲ್ಲಿ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದನ್ನು ಬಯಸುತ್ತಾರೆ ಎಂಬುದು ಅಲ್ಲಿನ ಕನ್ನಡಿಗರ ಅಭಿಪ್ರಾಯವಾಗಿದೆ. ಒಂದು ಭಾಷೆ ಮತ್ತೊಂದು ಭಾಷೆಯ ವಿರುದ್ಧವಾಗಿ ಇರುವುದಿಲ್ಲ. ಭಾರತ ಮತ್ತು ಬಹುಧರ್ಮದ, ಬಹುಭಾಷೆ, ಬಹುಸಂಸ್ಕೃತಿ. ಈ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಅಪಾಯಕಾರಿ ಯಾದುದು ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಭಾಷೆಯೂ ಜೊತೆಗೆ ನಾವೆಲ್ಲರೂ ಗೌರವಿಸುವ ಸಂವಿಧಾನದಲ್ಲಿ ಸ್ಪಷ್ಟವಾಗಿ ದ್ದು, ಸಂವಿಧಾನದ 29 ಮತ್ತು 30ನೇ ವಿಧಿಯ ಪ್ರಕಾರ ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿ ಯನ್ನು  ರಕ್ಷಿಸುವ  ಹಕ್ಕನ್ನು ನೀಡಿದೆ. ಸಂವಿಧಾನದ 350 (ಎ) ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯವನ್ನು ನೀಡಿ ದ್ದು, ಸಂವಿಧಾನದ 350(ಬಿ) ಅಲ್ಪಸಂಖ್ಯಾತರ ರಕ್ಷಣೆಯ ಖಾತರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಅಲ್ಪಸಂಖ್ಯಾತರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೊಳಿಸಲು ಹೊರಟರೆ ಇದನ್ನು ಕನ್ನಡಿಗರು ವಿರೋಧಿಸಲಿದ್ದಾರೆ. ಕಾಸರಗೋಡಿನ ಕನ್ನಡಿಗರ ಜೊತೆಯಲ್ಲಿ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಎಲ್ಲಾ ರೀತಿಯ  ಬೆಂಬಲವನ್ನು ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕೇರಳದ  ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ‘ಮಲಯಾಳಂ ಭಾಷಾ ಮಸೂದೆ 2025’ ಅನ್ನು ಸಂಪೂರ್ಣವಾಗಿ ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಗಡಿ ಪ್ರದೇಶಗಳ ಅಭಿವೃದ್ಧಿ ಪ್ರಾಧಿಕಾರ ಬುಧವಾರ ತಿಳಿಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು