ಉಡುಪಿ: ಕಠಿಣ ಪರಿಶ್ರಮ ಮತ್ತು ಏಕಾಗ್ರತೆ ಇದ್ದರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದನ್ನು ಉಡುಪಿ ಜಿಲ್ಲೆಯ ಶಂಕರನಾರಾಯಣದ ಪ್ರೀತಂ ಪೂಜಾರಿ ಸಾಬೀತುಪಡಿಸಿದ್ದಾರೆ. ಇಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಪ್ರೀತಂ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಮದುವೆ ಮನೆಯಲ್ಲಿದ್ದಾಗ ಒಲಿದು ಬಂತು ಅದೃಷ್ಟ!

ವಿಶೇಷವೆಂದರೆ, ಫಲಿತಾಂಶ ಪ್ರಕಟವಾದಾಗ ಪ್ರೀತಂ ಒಂದು ಮದುವೆ ಸಮಾರಂಭದಲ್ಲಿದ್ದರು. ಯಾವುದೇ ಒತ್ತಡವಿಲ್ಲದೆ ‘ಕೂಲ್’ ಆಗಿ ಶುಭಕಾರ್ಯದಲ್ಲಿ ಭಾಗಿಯಾಗಿದ್ದ ಪ್ರೀತಂಗೆ ಅವರ ತಂದೆ ಕರೆ ಮಾಡಿ, “ನಿನಗೆ 625ಕ್ಕೆ 625 ಬಂದಿದೆ” ಎಂದು ಹೇಳಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. “620 ಅಂಕ ಬರಬಹುದು ಎಂದುಕೊಂಡಿದ್ದೆ, ಆದರೆ ಪೂರ್ಣ ಅಂಕ ಬಂದಿರುವುದು ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಪ್ರೀತಂ ಹರ್ಷ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿಯಾಗಿರುವ ಪ್ರೀತಂ, ತನ್ನ ಸಾಧನೆಗೆ ಶಾಲೆಯ ಉತ್ತಮ ವಾತಾವರಣ ಮತ್ತು ಶಿಕ್ಷಕರೇ ಕಾರಣ ಎನ್ನುತ್ತಾರೆ.

“ನನ್ನ ಹ್ಯಾಂಡ್ ರೈಟಿಂಗ್ ಅಷ್ಟೊಂದು ಚೆನ್ನಾಗಿರಲಿಲ್ಲ, ಹಾಗಾಗಿ ಅಂಕಗಳು ಕಡಿತವಾಗಬಹುದು ಎಂಬ ಆತಂಕವಿತ್ತು. ಆದರೆ ಶಿಕ್ಷಕರು ನನ್ನ ಕೈಬರಹ ತಿದ್ದುವಲ್ಲಿ ತುಂಬಾ ಶ್ರಮ ವಹಿಸಿದ್ದರು” ಎಂದು ಪ್ರೀತಂ ನೆನಪಿಸಿಕೊಂಡಿದ್ದಾರೆ.ಪಾಠವನ್ನು ಸರಿಯಾಗಿ ಕೇಳಿಸಿಕೊಂಡರೆ ಸಾಕು, ಯಾವುದೇ ಒತ್ತಡವಿಲ್ಲದೆ ಅಂಕ ಗಳಿಸಬಹುದು ಎಂಬುದು ಇವರ ಮಂತ್ರ. ಕೇವಲ ಓದು ಮಾತ್ರವಲ್ಲದೆ ಕ್ವಿಜ್ ಮತ್ತು ಕ್ರೀಡೆಯಲ್ಲೂ ಪ್ರೀತಂ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ SSLC ಫಲಿತಾಂಶ 2026: ಶೇ. 94.1ರಷ್ಟು ದಾಖಲೆ ಪ್ರಮಾಣದ ತೇರ್ಗಡೆ; ಏಳು ವಿದ್ಯಾರ್ಥಿಗಳಿಗೆ 625ಕ್ಕೆ 625
ಭವಿಷ್ಯದ ಕನಸು:
ಖಾಸಗಿ ಬಸ್ ಕಂಡಕ್ಟರ್ ಅವರ ಪುತ್ರನಾಗಿರುವ ಪ್ರೀತಂಗೆ ಮುಂದೆ ಇಂಜಿನಿಯರಿಂಗ್ ಮಾಡುವ ಆಸೆ ಇದೆ. ಆದರೆ, ಮಗ ಐಎಎಸ್ (IAS) ಅಧಿಕಾರಿಯಾಗಬೇಕೆಂಬುದು ತಾಯಿಯ ಕನಸು. “ಯಾವತ್ತೂ ನಂಬರ್ ಒನ್ ಆಗಿರಬೇಕು ಎಂಬುದು ನನ್ನ ಹಠವಾಗಿತ್ತು, ಅದು ಇಂದು ಈಡೇರಿದೆ” ಎನ್ನುವ ಪ್ರೀತಂ ಮುಖದಲ್ಲಿ ಗೆಲುವಿನ ನಗು ಎದ್ದುಕಾಣುತ್ತಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

