ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ತಮ್ಮ 25ನೇ ವರ್ಷದ ಶಿಕ್ಷಣ ಯಾನದ ಸಂಭ್ರಮದಲ್ಲಿ ರಜತ ಮಹೋತ್ಸವವನ್ನು ಆಚರಿಸುತ್ತಿದ್ದು, ಅದರ ಸಮಾರೋಪ ಸಮಾರಂಭವು ಮೇ 7ರಂದು ಬಪ್ಪಳಿಗೆಯ ಅಂಬಿಕಾ ಆವರಣದ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ.
ಈ ಸಮಾರಂಭಕ್ಕೆ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ. ಮೇ 6ರಂದು ಸಂಜೆ ಗುರುಗಳ ಆಗಮನವಾಗಲಿದ್ದು, ಪೂರ್ಣಕುಂಭ ಸ್ವಾಗತ, ಧೂಳಿಪಾದ ಪೂಜೆ ಹಾಗೂ ರಾತ್ರಿ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ.

ಅಂಬಿಕಾ ಸಂಸ್ಥೆಗಳು ಎರಡು ದಶಕಗಳ ಹಿಂದೆ ಕೋಚಿಂಗ್ ಸೆಂಟರ್ ರೂಪದಲ್ಲಿ ಆರಂಭಗೊಂಡು, ಇಂದು ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಣದ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದೆ. ಉಚಿತ ಶಿಕ್ಷಣ, ವಾರ್ಷಿಕ ಕೋಟಿಗೂ ಮೀರಿದ ವಿದ್ಯಾರ್ಥಿವೇತನ, ರಾಷ್ಟ್ರಭಕ್ತಿ ಆಧಾರಿತ ಶಿಕ್ಷಣ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಅಂಬಿಕಾ ತನ್ನದೇ ಆದ ಗುರುತನ್ನು ಮೂಡಿಸಿದೆ.
ಇದನ್ನೂ ಓದಿ: ಟಾಪ್-೧೦ ರ‍್ಯಾಂಕ್ ಪಟ್ಟಿಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ೧೧ ವಿದ್ಯಾರ್ಥಿಗಳು

ಕಾರ್ಗಿಲ್ ಯೋಧರು ಸೇರಿದಂತೆ ರಾಷ್ಟ್ರಸೇವಕರನ್ನು ಸನ್ಮಾನಿಸುವುದು, ಕಾಶ್ಮೀರ ಪಂಡಿತರ ಮಕ್ಕಳಿಗೆ ಹಾಗೂ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಮುಂತಾದ ಸಮಾಜಮುಖಿ ಕಾರ್ಯಗಳು ಸಂಸ್ಥೆಯ ವಿಶೇಷತೆಯಾಗಿವೆ.
ನೂತನ ಆಪ್ ಲೋಕಾರ್ಪಣೆ
ರಜತ ಮಹೋತ್ಸವದ ಅಂಗವಾಗಿ ‘ಹಿಂದೂ ಸಂಪರ್ಕ ಸಾರಿಗೆ’ ಎಂಬ ಮೊಬೈಲ್ ಆಪ್ ಅನ್ನು ಜಗದ್ಗುರುಗಳು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಆಪ್ ಮೂಲಕ ಪುತ್ತೂರಿನ ಜನರು ಸುಲಭವಾಗಿ ಅಟೋ ರಿಕ್ಷಾ ಸೇವೆಯನ್ನು ಪಡೆಯಬಹುದಾಗಿದೆ. ಯಾವುದೇ ಲಾಭದ ಉದ್ದೇಶವಿಲ್ಲದೆ ಸೇವಾ ಮನೋಭಾವದಿಂದ ರೂಪಿಸಲಾದ ಈ ಆಪ್ ವಿಶೇಷವಾಗಿದೆ.
ಸಮಾಜ ಸೇವಾ ಕಾರ್ಯಗಳು
ಅಂಬಿಕಾ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದು, ಬಪ್ಪಳಿಗೆಯ ಮಾರಿಯಮ್ಮ ದೇವಸ್ಥಾನಕ್ಕೆ ₹3 ಲಕ್ಷ ವೆಚ್ಚದಲ್ಲಿ ಶೀಟ್ ಅಳವಡಿಕೆ ಮಾಡಿಕೊಟ್ಟಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ರಜತ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಪದ್ಮಭೂಷಣ ಡಾ. ಉನ್ನಿಕೃಷ್ಣನ್ ಹಾಗೂ ಉತ್ತರಾ ಉನ್ನಿಕೃಷ್ಣನ್ ಅವರ ಸಂಗೀತ ಕಾರ್ಯಕ್ರಮ, ಪರಮವೀರ ಚಕ್ರ ಪುರಸ್ಕೃತ ಯೋಧರ ಸನ್ಮಾನ ಕಾರ್ಯಕ್ರಮಗಳು ಗಮನಸೆಳೆದಿವೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

