ಬೆಂಗಳೂರು: ಸಿಲಿಕಾನ್ ಸಿಟಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ಪಂದ್ಯದ ವೇಳೆ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕ್ರೀಡಾಂಗಣದ ಭದ್ರತೆಗಾಗಿ ಅಳವಡಿಸಲಾಗಿದ್ದ ಬರೋಬ್ಬರಿ 240 ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ದುಷ್ಕರ್ಮಿಗಳು ಕಡಿತಗೊಳಿಸಿದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು? ಸಿಸಿಟಿವಿ ಕಟ್ ಮಾಡಿದ್ದು ಯಾಕೆ?

ಸಾವಿರಾರು ಜನರು ಸೇರುವ ಕ್ರೀಡಾಂಗಣದಲ್ಲಿ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿಗಳು ಅತ್ಯಂತ ಪ್ರಮುಖವಾಗಿವೆ. ಆದರೆ, ಪಂದ್ಯ ನಡೆಯುತ್ತಿದ್ದಾಗಲೇ ವ್ಯವಸ್ಥಿತವಾಗಿ 240 ಕ್ಯಾಮೆರಾಗಳ ಲಿಂಕ್ ಅನ್ನು ಕಡಿತಗೊಳಿಸಲಾಗಿತ್ತು. ಇದು ಯಾವುದಾದರೂ ದೊಡ್ಡ ಮಟ್ಟದ ಸಂಚಿನ ಭಾಗವೇ ಅಥವಾ ಕಳ್ಳತನಕ್ಕೆ ಮಾಡಿದ್ದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭದ್ರತಾ ಲೋಪದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಶಂಕಿತರನ್ನು ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ:Chinnaswamy stadium: ಸ್ಟಾಂಡ್‌ಗೆ ಡ್ರಾವಿಡ್, ಕುಂಬ್ಳೆ, ಶಾಂತ ರಂಗಸ್ವಾಮಿ ಹೆಸರು ನಾಮಕರಣ

ಟಿಕೆಟ್ ಬ್ಲ್ಯಾಕ್ ದಂಧೆ: 10 ಮಂದಿ ಪೊಲೀಸ್ ವಶಕ್ಕೆ
ಇದೇ ಪಂದ್ಯದ ವೇಳೆ ಕ್ರೀಡಾಂಗಣದ ಹೊರಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರುತ್ತಿದ್ದ 10 ಜನರನ್ನು ಬಂಧಿಸಲಾಗಿದ್ದು, ಅವರಿಂದ ಹಲವಾರು ಟಿಕೆಟ್ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಘಟನೆಗಳು ಕ್ರೀಡಾಂಗಣದ ಭದ್ರತಾ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಕೆಎಸ್‌ಸಿಎ (KSCA) ಮತ್ತು ಬೆಂಗಳೂರು ಪೊಲೀಸರು ಈ ಬಗ್ಗೆ ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

