ಕಡಬ: ಕುಮಾರಧಾರ ನದಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಘಟನೆ ನಡೆದಿದ್ದು, ತಡರಾತ್ರಿ ಯುವಕನ ಮೃತದೇಹ ಪತ್ತೆಯಾಗಿದೆ. ಮೃತ ಯುವಕನನ್ನು ಐತ್ತೂರು ಗ್ರಾಮದ ಮಂಜು ಎಂಬುವವರ ಪುತ್ರ ರಕ್ಷಿತ್ (26) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಐತ್ತೂರು ಗ್ರಾಮದ ಅರಬ್ಬಿ ತೋಡು ಎಂಬಲ್ಲಿ ರಕ್ಷಿತ್ ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗೆ ತೆರಳಿದ್ದರು. ರಕ್ಷಿತ್ ಅವರಿಗೆ ಈಜು ತಿಳಿದಿತ್ತಾದರೂ, ನದಿಯ ನೀರಿನ ಸೆಳೆತ ಮತ್ತು ಸುಳಿ ಹೆಚ್ಚಿದ್ದ ಕಾರಣ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ತಕ್ಷಣ ಸ್ನೇಹಿತರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಪುತ್ತೂರು: ಟ್ರಕ್ ಟೈರ್ ಪರಿಶೀಲನೆ ವೇಳೆ ಇಬ್ಬರಿಗೆ ಉದ್ಯಮಿಯ ಆಡಿ ಕಾರು ಡಿಕ್ಕಿ; ಓರ್ವನ ಸ್ಥಿತಿ ಗಂಭೀರ
ಕಡಬ ಪೊಲೀಸರು ಮತ್ತು ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರೊಂದಿಗೆ ಸೇರಿ ಶೋಧ ಕಾರ್ಯ ಆರಂಭಿಸಿದರಾದರೂ ಕತ್ತಲೆಯ ಕಾರಣದಿಂದ ಮೃತದೇಹ ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು. ತಡರಾತ್ರಿ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿತು. ಸುಮಾರು 30 ಅಡಿ ಆಳದ ನೀರಿನಲ್ಲಿ ಹೂತು ಹೋಗಿದ್ದ ರಕ್ಷಿತ್ ಅವರ ಮೃತದೇಹವನ್ನು ತಂಡವು ಯಶಸ್ವಿಯಾಗಿ ಹೊರತೆಗೆದಿದೆ.


