IPL: ಮಾರ್ಷ್ ಬ್ಯಾಟ್‌ನಿಂದ ಸಿಡಿದ ಶತಕ, ಆರ್‌ಸಿಬಿ ವಿರುದ್ಧ ಗೆದ್ದ ಲಕ್ನೋ

ಏಕಾನಾ ಕ್ರಿಕೆಟ್ ಕ್ರೀಡಾಂಗಣ ಬಿ ಮೈದಾನದಲ್ಲಿ ನಡೆದ ಐಪಿಎಲ್ 50ನೇ ಪಂದ್ಯದಲ್ಲಿ ಮಳೆಯ ಅಡಚಣೆ ನಡುವೆಯೂ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 9 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಮಳೆ ಎರಡು ಬಾರಿ ಪಂದ್ಯಕ್ಕೆ ಅಡ್ಡಿಯಾದ ಪರಿಣಾಮ 20 ಓವರ್‌ಗಳ ಪಂದ್ಯವನ್ನು 19 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ, 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಬಳಿಕ ಡಕ್ವರ್ಥ್ ಲೂಯಿಸ್ (DLS) ನಿಯಮದ ಪ್ರಕಾರ ಆರ್‌ಸಿಬಿಗೆ 213 ರನ್‌ಗಳ ಗುರಿ ನೀಡಲಾಯಿತು.

ಲಕ್ನೋ ಪರ ಮಿಚೆಲ್ ಮಾರ್ಷ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 111ರನ್ ಸಿಡಿಸಿದರು. ಇದು ಮಾರ್ಷ್ ಅವರ ಎರಡನೇ ಐಪಿಎಲ್ ಶತಕವಾಗಿದ್ದು, ಲಕ್ನೋ ಪರ ದಾಖಲಾದ ಅತ್ಯಂತ ವೇಗದ ಶತಕವೂ ಆಗಿದೆ.

ನಿಕೋಲಸ್ ಪೂರನ್ 38 ರನ್ ಗಳಿಸಿದರೆ, ರಿಷಭ್ ಪಂತ್ ಅಜೇಯ 32 ರನ್ ಸೇರಿಸಿದರು. ಅರ್ಶಿನ್ ಕುಲಕರ್ಣಿ 17 ಹಾಗೂ ಐಡೆನ್ ಮಾರ್ಕ್ರಾಮ್ ಅಜೇಯ 1 ರನ್ ಗಳಿಸಿದರು.

ಇದನ್ನೂ ಓದಿ: IPL: ಕಾನೋಲಿ ಶತಕ ವ್ಯರ್ಥ, ಪಂಜಾಬ್ ವಿರುದ್ಧ ಹೈದರಾಬಾದ್‌ಗೆ ಭರ್ಜರಿ ಜಯ 

ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್, ರಾಸಿಖ್ ಸಲಾಂ ಹಾಗೂ ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಕೇವಲ ೯ ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು. ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರೆ, ಜಾಕೋಬ್ ಬೆಥೆಲ್ 4 ರನ್ ಮಾತ್ರ ಗಳಿಸಿದರು.

ನಂತರ ದೇವದತ್ ಪಡಿಕ್ಕಲ್ 34 ಹಾಗೂ ನಾಯಕ ರಜತ್ ಪಾಟಿದಾರ್ 61 ರನ್‌ಗಳ ಜವಾಬ್ದಾರಿಯುತ ಆಟದ ಮೂಲಕ ಹೋರಾಟ ನಡೆಸಿದರು. ಅಂತಿಮ ಹಂತದಲ್ಲಿ ಟಿಮ್ ಡೇವಿಡ್ 40 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕೃನಾಲ್ ಪಾಂಡ್ಯ ಅಜೇಯ 28 ಹಾಗೂ ರೊಮಾರಿಯೊ ಶೆಫರ್ಡ್ ಅಜೇಯ 16 ರನ್ ಗಳಿಸಿದರು.

ಆರ್.ಸಿ.ಬಿ. ತಂಡವು 19 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲಷ್ಟೇ ಶಕ್ತವಾಯಿತು.

ಲಕ್ನೋ ಪರ ಪ್ರಿನ್ಸ್ ಯಾದವ್ 3 ವಿಕೆಟ್ ಪಡೆದು ಮಿಂಚಿದರೆ, ಶಹಬಾಜ್ ಅಹ್ಮದ್ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಡಿಎಲ್‌ಎಸ್ ಎಂದರೇನು?

ಕ್ರಿಕೆಟ್‌ನಲ್ಲಿ ಮಳೆ ಅಥವಾ ಅನಿವಾರ್ಯ ಕಾರಣಗಳಿಂದ ಪಂದ್ಯಕ್ಕೆ ಅಡ್ಡಿಯಾದಾಗ ಬಳಸುವ ಡಕ್ವರ್ತ್-ಲೂಯಿಸ್-ಸ್ಟರ್ನ್ (DLS) ವಿಧಾನವು ಅತ್ಯಂತ ಸಂಕೀರ್ಣವಾದ ಗಣಿತದ ಸೂತ್ರವಾಗಿದೆ. ಇದು ಕೇವಲ ರನ್ ರೇಟ್ ಮೇಲೆ ಅವಲಂಬಿತವಾಗದೆ, ತಂಡದ ಬಳಿ ಇರುವ ಎರಡು ಪ್ರಮುಖ ಸಂಪನ್ಮೂಲಗಳಾದ ‘ಉಳಿದಿರುವ ಓವರ್‌ಗಳು’ ಮತ್ತು ‘ಕೈಯಲ್ಲಿರುವ ವಿಕೆಟ್‌ಗಳನ್ನು’ ಆಧರಿಸಿ ಫಲಿತಾಂಶವನ್ನು ನಿರ್ಧರಿಸುತ್ತದೆ.

ಪಂದ್ಯವು ಅರ್ಧಕ್ಕೆ ನಿಂತಾಗ, ಈ ಎರಡು ಸಂಪನ್ಮೂಲಗಳನ್ನು ಶೇಕಡಾವಾರು ಲೆಕ್ಕಾಚಾರ ಮಾಡಿ, ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೊಸ ಗುರಿಯನ್ನು (Target) ನಿಗದಿಪಡಿಸಲಾಗುತ್ತದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು