ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾರಿ ಸಮುದಾಯವು ಅತ್ಯಂತ ದೊಡ್ಡ ರಾಜಕೀಯ ಶಕ್ತಿಯಾಗಿ ನಿಂತಿತ್ತು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಮರಿಸಿದ್ದಾರೆ. ಮಂಗಳೂರಿನ ಮೊರ್ಗನ್‌ಗೇಟ್‌ನಲ್ಲಿ ಆಯೋಜಿಸಲಾಗಿದ್ದ ಬ್ಯಾರಿಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (BCCI) ಸಂಸ್ಥೆಯ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬ್ಯಾರಿ ಸಮುದಾಯದವರು ಸ್ವಭಾವತಃ ವ್ಯವಹಾರ ಚತುರರು ಎಂದ ಸಚಿವರು, ಕರಾವಳಿ ಭಾಗದಲ್ಲಿ ಬಂಗಾರಪ್ಪನವರಿಗೆ ಈ ಸಮುದಾಯದಲ್ಲಿ ಅಪಾರ ಅಭಿಮಾನಿಗಳಿದ್ದರು ಎಂದರು. “1991-92ರ ಅವಧಿಯಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸಮುದಾಯಕ್ಕೆ ಡೆಂಟಲ್ ಕಾಲೇಜು ಮಂಜೂರು ಮಾಡಿದ್ದರು. ಅದೇ ಸಮಯದಲ್ಲಿ ಯೆನೆಪೋಯ ಸಂಸ್ಥೆಗೂ ಅನುಮತಿ ನೀಡಿದ್ದರು. ಇಂದು ಯೆನೆಪೋಯ ಸಂಸ್ಥೆಯು ದೇಶದಲ್ಲೇ ದೊಡ್ಡದಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರ” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು. ಇದೇ ವೇಳೆ, ಪದ್ಮಶ್ರೀ ಪುರಸ್ಕೃತ ಡಾ. ಹರೇಕಳ ಹಾಜಬ್ಬ ಅವರ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೂ ಸರ್ಕಾರ ತಕ್ಷಣ ಮಂಜೂರು ಮಾಡಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮಂಗಳೂರಲ್ಲಿ ಭರ್ಜರಿ ಬೇಟೆ: ಕೇರಳಕ್ಕೆ ಸಾಗಿಸುತ್ತಿದ್ದ 27 ಜಾನುವಾರುಗಳ ರಕ್ಷಣೆ, ಇಬ್ಬರು ಆರೋಪಿಗಳ ಬಂಧನ!
ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ವೈ. ಅಬ್ದುಲ್ಲ ಕುಂಞಿ ಅವರು ಸಮಾರಂಭವನ್ನು ಉದ್ಘಾಟಿಸಿದರು. ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಅವರ ಗಣನೀಯ ಸಾಧನೆಯನ್ನು ಗುರುತಿಸಿ ಇದೇ ವೇದಿಕೆಯಲ್ಲಿ ಅವರಿಗೆ ಪ್ರತಿಷ್ಠಿತ ‘ಬ್ಯಾರಿ ಲೆಜೆಂಡ್ ಅವಾರ್ಡ್’ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ‘ಬಾನ್ಯ’ ಮಾಹಿತಿ ಪತ್ರ ಮತ್ತು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


