ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿರುವ ನೀಟ್-ಯುಜಿ (NEET-UG) 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (CBI) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಪ್ರಕರಣದ ಕಿಂಗ್‌ಪಿನ್ ಕೆಮೆಸ್ಟ್ರಿ ಉಪನ್ಯಾಸಕ ಪಿ.ವಿ. ಕುಲಕರ್ಣಿಯನ್ನು ನಿನ್ನೆ ಬಂಧಿಸಿದ್ದ ಸಿಬಿಐ ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಪ್ರಶ್ನೆಪತ್ರಿಕೆ ತಯಾರಿಕಾ ಸಮಿತಿಯಲ್ಲಿ ಸದಸ್ಯೆಯಾಗಿದ್ದ ಬಯೋಲಾಜಿ ಉಪನ್ಯಾಸಕಿ ಮನೀಷಾ ಮಂಡಾರೆ ಎಂಬಾಕೆಯನ್ನು ಬಂಧಿಸಿದೆ.
ಸಿಬಿಐ ಮೂಲಗಳ ಪ್ರಕಾರ, ಮನೀಷಾ ಮಂಡಾರೆ ಕೂಡ ಕುಲಕರ್ಣಿಯಂತೆ ಪ್ರಶ್ನೆಪತ್ರಿಕೆ ಸೋರಿಕೆಗೆ ಒಂದೇ ಮಾದರಿಯ ವಿಧಾನ ಅನುಸರಿಸಿದ್ದಳು. ಲಕ್ಷಾಂತರ ರೂಪಾಯಿ ಪಾವತಿಸಿದ ವಿದ್ಯಾರ್ಥಿಗಳ ಗುಂಪಿಗೆ ಪ್ರಶ್ನೆಗಳು, ಬಹು ಆಯ್ಕೆ ಉತ್ತರಗಳು (MCQ options) ಹಾಗೂ ಸರಿಯಾದ ಉತ್ತರಗಳನ್ನು ಡಿಕ್ಟೇಟ್ ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳು ಅದನ್ನು ತಮ್ಮ ನೋಟ್‌ಬುಕ್‌ಗಳಲ್ಲಿ ಕೈಬರಹದ ಮೂಲಕ ಬರೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಎನ್‌ಟಿಎಯಿಂದಲೇ ಎರಡು ಮಾದರಿಯ ಪ್ರಶ್ನೆಪತ್ರಿಕೆ ಸೋರಿಕೆ
ಸಿಬಿಐ ತನಿಖೆಯಲ್ಲಿ ಎನ್‌ಟಿಎಯಿಂದಲೇ ಎರಡು ಮಾದರಿಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದು ಬಹಿರಂಗವಾಗಿದೆ. ಒಂದು ಕೈಬರಹದ ಪ್ರಶ್ನೆಪತ್ರಿಕೆ, ಮತ್ತೊಂದು ಟೈಪ್ ಮಾಡಿದ ಪ್ರಶ್ನೆಪತ್ರಿಕೆ. ಈ ಎರಡರ ಸೋರಿಕೆಯಲ್ಲಿ ಕುಲಕರ್ಣಿ ಮತ್ತು ಮನೀಷಾ ಮಂಡಾರೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂಗ್ರೆಸ್ ಭಾರಿ ಪ್ರತಿಭಟನೆ: ನೀಟ್ ಹಗರಣ ಹಾಗೂ ಇಂಧನ ದರ ಏರಿಕೆ ವಿರುದ್ಧ ರಸ್ತೆ ತಡೆ; ಹಲವರು ವಶಕ್ಕೆ!
“ಪೇಪರ್ ಲೀಕ್ ಪ್ರಕರಣಗಳಲ್ಲಿ ಮೊದಲ ಬಾರಿಗೆ ನಾವು ಸೋರಿಕೆಯ ಮೂಲವನ್ನೇ ಎನ್‌ಟಿಎ ಒಳಗೆ ಪತ್ತೆಹಚ್ಚಿದ್ದೇವೆ. ಪ್ರಶ್ನೆಪತ್ರಿಕೆ ಪಿಡಿಎಫ್‌ಗಳು ಮೆಸೇಜಿಂಗ್ ಆ್ಯಪ್‌ಗಳಲ್ಲಿ ಹರಿದಾಡಿದ ಬಳಿಕ ನೂರಾರು ಮಂದಿಗೆ ಲಾಭವಾಗಿರಬಹುದು. ಆದರೆ ಮೊದಲು ಸೋರಿಕೆಯ ಮೂಲ ಹಾಗೂ ಅದರ ಸಹಚರರನ್ನು ಪತ್ತೆಹಚ್ಚುವುದು ನಮ್ಮ ಆದ್ಯತೆ” ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ಯೂಟಿ ಪಾರ್ಲರ್ ಮಾಲಕಿ ಮೂಲಕ ಹಣ ಸಂಗ್ರಹ
ತನಿಖೆ ಪ್ರಕಾರ, ಏಪ್ರಿಲ್ ಕೊನೆಯ ವಾರದಲ್ಲಿ ಕುಲಕರ್ಣಿ ವಿದ್ಯಾರ್ಥಿಗಳನ್ನು ಸೇರಿಸುವ ಕೆಲಸವನ್ನು ಮನೀಷಾ ವಾಘ್ಮಾರೆ ಎಂಬ ಸಹಆರೋಪಿಯ ಮೂಲಕ ನಡೆಸಿದ್ದಾನೆ. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮನೀಷಾ ವಾಘ್ಮಾರೆ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ್ದಳು. ಆಕೆಯನ್ನು ಈಗಾಗಲೇ ಬಂಧಿಸಲಾಗಿದೆ.
ಪುಣೆಯಲ್ಲಿ ಗುಪ್ತ ತರಗತಿ
ಪುಣೆಯಲ್ಲಿರುವ ತನ್ನ ನಿವಾಸದಲ್ಲಿ ಕುಲಕರ್ಣಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಉತ್ತರ ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನು ಹೇಳಿಕೊಡುತ್ತಿದ್ದ. ವಿದ್ಯಾರ್ಥಿಗಳು ಅದನ್ನು ತಮ್ಮ ಪುಸ್ತಕಗಳಲ್ಲಿ ಬರೆದುಕೊಳ್ಳುತ್ತಿದ್ದರು. ಟೆಲಿಗ್ರಾಂ ಮೂಲಕ ಪಿಡಿಎಫ್ ರವಾನೆ ಮಾಡಿದ್ದರು ಎನ್ನಲಾಗಿದೆ.
ಹೊರಬಿತ್ತು ಹೊಸ ಮಾಹಿತಿ
ನಾಸಿಕ್ ಮೂಲದ ಶುಭಂ ಖೈರ್ನರ್, ಗುರುಗ್ರಾಮ ಮೂಲದ ಯಶ್ ಯಾದವ್‌ಗೆ ಏಪ್ರಿಲ್‌ನಲ್ಲಿ ಸಂಪರ್ಕಿಸಿ, ಮಂಗೀಲಾಲ್ ಬಿವಾಲ್ (ಅಥವಾ ಮಂಗೀಲಾಲ್ ಖಟಿಕ್) ಎಂಬಾತ ತನ್ನ ಕಿರಿಯ ಮಗನಿಗೆ ಮೆಡಿಕಲ್ ಕಾಲೇಜು ಪ್ರವೇಶಕ್ಕಾಗಿ ಪ್ರಶ್ನೆಪತ್ರಿಕೆ ಖರೀದಿಸಲು ₹10–12 ಲಕ್ಷ ನೀಡಲು ಸಿದ್ಧನಿದ್ದಾನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾರಿ ತಿರುವು: ಎನ್ಟಿಎ (NTA) ಒಳಗಿನ ಸಂಚು ಬಯಲು ಮಾಡಿದ ಸಿಬಿಐ!
ಏಪ್ರಿಲ್ 29ರಂದು ಖೈರ್ನರ್, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದ ಸುಮಾರು 500–600 ಪ್ರಶ್ನೆಗಳನ್ನು ಒದಗಿಸಬಹುದು ಎಂದು ಯಶ್ ಯಾದವ್‌ಗೆ ಹೇಳಿದ್ದಾನೆ. ಜೊತೆಗೆ 10ನೇ ಹಾಗೂ 12ನೇ ತರಗತಿ ದಾಖಲೆಗಳು, NEET ರೋಲ್ ನಂಬರ್ ಹಾಗೂ ಭದ್ರತಾ ಠೇವಣಿಯಾಗಿ ಚೆಕ್ ಕೇಳಿದ್ದಾನೆ.
ಅದೇ ದಿನ, ಯಶ್ ಯಾದವ್‌ಗೆ ಟೆಲಿಗ್ರಾಂ ಮೂಲಕ ಪ್ರಶ್ನೆಪತ್ರಿಕೆ ಪಿಡಿಎಫ್‌ಗಳು ಬಂದಿದ್ದು, ಅವುಗಳನ್ನು ಮಂಗೀಲಾಲ್‌ಗೆ ಕಳುಹಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸುಮಾರು 150 ಪ್ರಶ್ನೆಗಳು ನಿಜವಾದ ಪರೀಕ್ಷೆಯಲ್ಲಿ ಬಂದರೆ ₹10 ಲಕ್ಷ ಪಾವತಿಸುವ ಒಪ್ಪಂದ ನಡೆದಿತ್ತು ಎನ್ನಲಾಗಿದೆ.
ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಹಂಚಿಕೆ
ಮಂಗೀಲಾಲ್ ಪ್ರಶ್ನೆಪತ್ರಿಕೆಗಳ ಮುದ್ರಿತ ಪ್ರತಿಗಳನ್ನು ಪರೀಕ್ಷೆ ಬರೆದ ತನ್ನ ಮೂವರು ಕುಟುಂಬ ಸದಸ್ಯರಿಗೆ, ಮಗ ವಿಕಾಸ್‌ನ ಸ್ನೇಹಿತರಿಗೆ, ಶಿಕ್ಷಕ ಸತ್ಯನಾರಾಯಣ ಎಂಬವರಿಗೆ ನೀಡಿದ್ದಾನೆ ಎನ್ನಲಾಗಿದೆ. ಹಣ ಪಡೆದು ಉತ್ತರಪತ್ರಿಕೆಗಳೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಹಂಚಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಮಂಗೀಲಾಲ್ ಮೊಬೈಲ್‌ನಿಂದ ಸಿಬಿಐ ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ.
ನಾಲ್ಕು ದಿನ, ಐದು ರಾಜ್ಯ, 8 ಆರೋಪಿಗಳು
ಪ್ರಕರಣ ಬೆಳಕಿಗೆ ಬಂದ ನಾಲ್ಕು ದಿನಗಳಲ್ಲಿ ಐದು ರಾಜ್ಯಗಳಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಪುಣೆಯ ಪಿ.ವಿ. ಕುಲಕರ್ಣಿ, ಮನೀಷಾ ವಾಘ್ಮಾರೆ, ಅಹಿಲ್ಯನಗರದ ಧನಂಜಯ್ ಲೋಕಂಡಾ, ನಾಸಿಕ್‌ನ ಶುಭಂ ಖೈರ್ನರ್, ಜೈಪುರದ ಮಂಗೀಲಾಲ್, ವಿಕಾಸ್ ಬಿವಾಲ್, ದಿನೇಶ್ ಬಿವಾಲ್, ಗುರುಗ್ರಾಮದ ಯಶ್ ಯಾದವ್ ಬಂಧಿತರು.
ಪ್ರಕರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಲಾಭ ಪಡೆದ ವಿದ್ಯಾರ್ಥಿಗಳ ಪತ್ತೆ ಕಾರ್ಯವೂ ಮುಂದುವರಿದಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


