ದುಬಾರೆಯಲ್ಲಿ ಆನೆಗಳ ಕಾದಾಟದ ದುರಂತ: ಪ್ರವಾಸಿ ಮಹಿಳೆ ಬಲಿಯಾದ ಬೆನ್ನಲ್ಲೇ ತೀವ್ರ ಗಾಯಗೊಂಡಿದ್ದ ಆನೆ ‘ಮಾರ್ತಾಂಡ’ ಸಾವು! ಕಣ್ಣೀರಿಟ್ಟ ಮಾವುತರು

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ವಿಶ್ವಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ನಡೆದ ದಾರುಣ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 53 ವರ್ಷದ ಜನಪ್ರಿಯ ಆನೆ ‘ಮಾರ್ತಾಂಡ’ ಮೇ 19ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಕಲ್ಲು ಹೃದಯವನ್ನೂ ಕರಗಿಸುವಂತಿರುವ ಈ ಜಲ ದುರಂತದಲ್ಲಿ ಈಗಾಗಲೇ ಓರ್ವ ಪ್ರವಾಸಿ ಮಹಿಳೆ ಪ್ರಾಣ ಕಳೆದುಕೊಂಡಿದ್ದು, ಇದೀಗ ಆನೆಯೂ ಮೃತಪಟ್ಟಿರುವುದು ಇಡೀ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಏನಾಗಿತ್ತು ದುಬಾರೆ ಶಿಬಿರದಲ್ಲಿ?:

ಸೋಮವಾರ ಬೆಳಿಗ್ಗೆ ಕಾವೇರಿ ನದಿಯಲ್ಲಿ ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುವ ದೈನಂದಿನ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ‘ಕಂಜನ್’ ಎಂಬ ಮತ್ತೊಂದು ಸಾಕಾನೆ ಹಠಾತ್ ಉಗ್ರ ರೂಪ ತಳೆದು ಮಾರ್ತಾಂಡ ಆನೆಯ ಮೇಲೆ ಭೀಕರವಾಗಿ ದಾಳಿ ಮಾಡಿತ್ತು. ಕಂಜನ್‌ನ ತೀವ್ರವಾದ ಇರಿತ ಮತ್ತು ಹೊಡೆತಕ್ಕೆ ಸಿಲುಕಿದ ಮಾರ್ತಾಂಡ ನದಿಯಲ್ಲೇ ನಿಯಂತ್ರಣ ತಪ್ಪಿ ಬಿದ್ದಿತ್ತು. ಈ ವೇಳೆ ಅಲ್ಲಿಯೇ ನಿಂತಿದ್ದ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಜೋಯ್ಸಿ (33) ಎಂಬವರು ಆನೆಯ ಕೆಳಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದರು. ಅವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.

ಇದನ್ನೂ ಓದಿ:ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತ: ಸಾಕಾನೆಗಳ ಪರಸ್ಪರ ಕಾದಾಟದ ನಡುವೆ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ದಾರುಣ ಸಾವು!

ಇಲ್ಲಿದೆ ನೋಡಿ ವಿಡಿಯೋ

ಆನೆಗಳ ಕಾದಾಟದ ವೇಳೆ ಮಾರ್ತಾಂಡನ ಹೊಟ್ಟೆ ಮತ್ತು ಕಾಲುಗಳ ಭಾಗಕ್ಕೆ ಅತ್ಯಂತ ಆಳವಾದ ಗಾಯಗಳಾಗಿದ್ದವು. ಘಟನೆ ನಡೆದ ತಕ್ಷಣ ಅರಣ್ಯ ಇಲಾಖೆಯ ಹಿರಿಯ ಪಶುವೈದ್ಯರ ತಂಡ ಮಾರ್ತಾಂಡನಿಗೆ ತೀವ್ರ ನಿಗಾ ಘಟಕದಲ್ಲಿ ಗ್ಲುಕೋಸ್ ಹಾಗೂ ತುರ್ತು ಚಿಕಿತ್ಸೆ ನೀಡಿ ಬದುಕಿಸಲು ಸತತ ಪ್ರಯತ್ನ ನಡೆಸಿತು. ಆದರೆ, ಆಂತರಿಕ ರಕ್ತಸ್ರಾವ ಹಾಗೂ ಗಾಯದ ತೀವ್ರತೆಯಿಂದಾಗಿ ಮಾರ್ತಾಂಡ ಇಂದು ಬೆಳಿಗ್ಗೆ ಮೃತಪಟ್ಟಿದೆ. ಮೈಸೂರು ದಸರಾದಲ್ಲೂ ಭಾಗವಹಿಸುತ್ತಿದ್ದ ಅತ್ಯಂತ ಶಾಂತ ಸ್ವಭಾವದ ಮಾರ್ತಾಂಡನ ಸಾವಿನ ಸುದ್ದಿ ಕೇಳಿ ಆತನನ್ನು ಮಗನಂತೆ ಸಾಕಿದ್ದ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಸಿಬ್ಬಂದಿ ಕಣ್ಣೀರಿಡುತ್ತಿದ್ದಾರೆ. ಘಟನೆಯ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಆನೆ ಶಿಬಿರಗಳಿಗೆ ಹೊಸ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು (SOP) ಜಾರಿಗೊಳಿಸಲು ಆದೇಶಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು