ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಕಂಗಾಲಾಗಿದ್ದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಅತ್ಯಂತ ಸಿಹಿ ಸುದ್ದಿ ನೀಡಿದೆ. ಈ ವರ್ಷದ ನೈಋತ್ಯ ಮುಂಗಾರು (Monsoon) ನಿಗದಿತ ಸಮಯಕ್ಕಿಂತ ಮುಂಚಿತವಾಗಿ, ಅಂದರೆ ಇದೇ ಮೇ 26 ರಂದು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಮುಂಗಾರು ಆಗಮನದ ಬೆನ್ನಲ್ಲೇ ಕರ್ನಾಟಕದಲ್ಲೂ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಪ್ರವೇಶಕ್ಕೂ ಮುನ್ನವೇ ರಾಜ್ಯದಲ್ಲಿ ಇಂದಿನಿಂದ (ಮೇ 20) ಮೇ 22 ರವರೆಗೆ ಮೂರು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹವಾಮಾನದಲ್ಲಿ ತೀವ್ರ ಏರುಪೇರಾಗಲಿದ್ದು, ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.
ಮಳೆಯ ಜೊತೆಗೆ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಸಿಡಿಲು ಮತ್ತು ಮಿಂಚಿನ ಆರ್ಭಟವೂ ಹೆಚ್ಚಿರಲಿದೆ. ಬಿರುಗಾಳಿಯ ತೀವ್ರತೆಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮತ್ತು ರೈತರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಿಗೆ ಈಗಾಗಲೇ ಅಗತ್ಯ ಮುನ್ನೆಚ್ಚರಿಕೆಗಳನ್ನು ರವಾನಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


