ನ್ಯೂಯಾರ್ಕ್: ಜಾಗತಿಕ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಕಂಪನಿಗಳ ಪುನರ್ರಚನೆ ಮತ್ತು ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನದ ಅಬ್ಬರ ಹೆಚ್ಚಾದ ಬೆನ್ನಲ್ಲೇ, ಪ್ರಸಿದ್ಧ ವೃತ್ತಿಪರ ಜಾಲತಾಣವಾದ ಲಿಂಕ್ಡ್‌ಇನ್ (LinkedIn) 600ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ. ಈ ಹೊಸ ಉದ್ಯೋಗ ಕಡಿತವು ಇದೇ ಜುಲೈ 13 ರಿಂದ ಜಾರಿಗೆ ಬರಲಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಕಾರ್ಮಿಕರ ಹೊಂದಾಣಿಕೆ ಮತ್ತು ಮರುತರಬೇತಿ ಅಧಿಸೂಚನೆ (WARN) ಸಲ್ಲಿಕೆಯ ಪ್ರಕಾರ, ಲಿಂಕ್ಡ್‌ಇನ್ ಕಳೆದ ವಾರವೇ ತನ್ನ 606 ಪೂರ್ಣಾವಧಿ ಉದ್ಯೋಗಿಗಳಿಗೆ ಶಾಶ್ವತ ಉದ್ಯೋಗ ಕಡಿತದ (Permanent Layoffs) ನೋಟಿಸ್ ನೀಡಿದೆ. ಕಂಪನಿಯು ತನ್ನ ಬೆಳವಣಿಗೆಯಾಗುತ್ತಿರುವ ವಿಭಾಗಗಳ ಮೇಲೆ ಗಮನ ಹರಿಸಲು ಮತ್ತು ತಂಡಗಳನ್ನು ಮರುಸಂಘಟಿಸಲು ತನ್ನ ಒಟ್ಟು ಕಾರ್ಯಪಡೆಯ ಶೇಕಡಾ 5 ರಷ್ಟು ಜನರನ್ನು ವಜಾಗೊಳಿಸಲು ಯೋಜಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರಸ್ತುತ ಲಿಂಕ್ಡ್‌ಇನ್ ವಿಶ್ವಾದ್ಯಂತ 17,500 ಕ್ಕೂ ಹೆಚ್ಚು ಪೂರ್ಣಾವಧಿ ನೌಕರರನ್ನು ಹೊಂದಿದೆ.
ಮೈಕ್ರೋಸಾಫ್ಟ್ (Microsoft) ಒಡೆತನದ ಲಿಂಕ್ಡ್‌ಇನ್‌ನ ಆದಾಯವು ಕಳೆದ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ (YoY) ಶೇಕಡಾ 12 ರಷ್ಟು ಹೆಚ್ಚಳ ಕಂಡಿದೆ. ಆದಾಗ್ಯೂ, ಕಂಪನಿಯು ಆಂತರಿಕ ಪುನರ್ರಚನೆಗಾಗಿ ಈ ಕಠಿಣ ನಿರ್ಧಾರ ಕೈಗೊಂಡಿದೆ. ಮೈಕ್ರೋಸಾಫ್ಟ್ ಸಂಸ್ಥೆಯು ಡಿಸೆಂಬರ್ 2016 ರಲ್ಲಿ ಲಿಂಕ್ಡ್‌ಇನ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು.
ಇದನ್ನೂ ಓದಿ: ಬಂಟ್ವಾಳ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತ್ರಿವಳಿಗಳ ಕಮಾಲ್; ಸಾಧನೆಯಲ್ಲೂ ಒಬ್ಬರಿಗೊಬ್ಬರು ಪೈಪೋಟಿ!
ಲಿಂಕ್ಡ್‌ಇನ್‌ನ ಈ ಪ್ರಕಟಣೆಯ ಬೆನ್ನಲ್ಲೇ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆಯಾದ ಮೆಟಾ (Meta) ಜಾಗತಿಕವಾಗಿ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಮೆಟಾ ಸಂಸ್ಥೆಯು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಮತ್ತು ಆ ವಿಭಾಗದಲ್ಲಿ ಬಂಡವಾಳ ಹೂಡಿಕೆಯನ್ನು ತೀವ್ರಗೊಳಿಸುತ್ತಿರುವುದರಿಂದ ಈ ಬೃಹತ್ ಉದ್ಯೋಗ ಕಡಿತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಉದ್ಯೋಗ ಕೊಡೋ ಸಂಸ್ಥೆಯ ನೌಕರರೇ ಬೀದಿಗೆ!: ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ ಲಿಂಕ್ಡ್‌ಇನ್ ಲೇಆಫ್ ಮೇಲಿನ ಮೀಮ್ಸ್ ಹಾಗೂ ಟ್ರೋಲ್ಸ್!
“ಇಡೀ ಜಗತ್ತಿಗೆ ಕೆಲಸ ಹುಡುಕಿಕೊಡುವ ಲಿಂಕ್ಡ್ ಇನ್ (LinkedIn) ಸಂಸ್ಥೆಯ ನೌಕರರೇ ಈಗ ಬೇರೆ ಉದ್ಯೋಗ ಹುಡುಕಬೇಕಾದ ಪರಿಸ್ಥಿತಿ ಬಂದಿದೆ ಮಾರಾಯ್ರೆ!” – ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ಡ್‌ಇನ್ ಮತ್ತು ಮೆಟಾ ಕಂಪನಿಗಳ ಉದ್ಯೋಗ ಕಡಿತದ (Layoffs) ನಿರ್ಧಾರ ಭಾರಿ ಟ್ರೋಲ್ ಆಗುತ್ತಿದ್ದು, ನೆಟ್ಟಿಗರು ಕಾರ್ಪೊರೇಟ್ ಜಗತ್ತಿನ ಈ ವಿಪರ್ಯಾಸವನ್ನು ತರಹೇವಾರಿ ಮೀಮ್ಸ್ (Memes) ಮೂಲಕ ಚುಚ್ಚಿ ಚುಚ್ಚಿ ಪ್ರಶ್ನಿಸುತ್ತಿದ್ದಾರೆ.
ಇಲ್ಲಿದೆ ನೋಡಿ ವೈರಲ್ ವಿಡಿಯೋ
View this post on Instagram
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ರೀಲ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಹೇಗೆ ಮಾನವ ಸಂಪನ್ಮೂಲವನ್ನು ಕಡೆಗಣಿಸಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಿದೆ. ಕಂಪನಿಗಳು ಶತಕೋಟಿ ಡಾಲರ್ ಲಾಭ ಗಳಿಸುತ್ತಿದ್ದರೂ, ಆಂತರಿಕ ಪುನರ್ರಚನೆ ಮತ್ತು ಎಐ ಪುಶ್ (AI Push) ಹೆಸರಿನಲ್ಲಿ ಅನುಭವಿ ಟೆಕ್ಕಿಗಳನ್ನು ರಾತ್ರೋರಾತ್ರಿ ಕೆಲಸದಿಂದ ವಜಾಗೊಳಿಸುತ್ತಿರುವ ಕಾರ್ಪೊರೇಟ್ ನೀತಿಯನ್ನು ಯುವ ಜನಾಂಗ ಈ ರೀಲ್ಸ್ ಕಮೆಂಟ್‌ಗಳಲ್ಲಿ ತೀವ್ರವಾಗಿ ಖಂಡಿಸುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


