ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರ ಮನಗೆದ್ದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್!

ತಿರುವನಂತಪುರಂ: ಕೇರಳಂದ 16ನೇ ವಿಧಾನಸಭೆಯ ನೂತನ ಅಧಿವೇಶನವು ಗುರುವಾರ (ಮೇ 21) ಅತ್ಯಂತ ಅದ್ಧೂರಿಯಾಗಿ ಆರಂಭಗೊಂಡಿದ್ದು, ಗಡಿನಾಡಿನಲ್ಲಿ ಕನ್ನಡದ ಕಂಪು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಅಧಿವೇಶನದ ಮೊದಲ ದಿನ ನಡೆದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ, ಕಾಸರಗೋಡು ಜಿಲ್ಲೆಯ ಗಡಿನಾಡು ಕ್ಷೇತ್ರವಾದ ಮಂಜೇಶ್ವರ ಕ್ಷೇತ್ರದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಶಾಸಕ ಎ. ಕೆ. ಎಂ. ಅಶ್ರಫ್ ಅವರು ಕನ್ನಡ ಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇಡೀ ಸದನದ ಗಮನ ಸೆಳೆದಿದ್ದಾರೆ.

ವಿಧಾನಸಭೆಯ ಬಹುತೇಕ ಎಲ್ಲಾ ಶಾಸಕರು ಮಲಯಾಳಂ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಶಾಸಕ ಅಶ್ರಫ್ ಅವರು ವೇದಿಕೆಗೆ ಬಂದು “ಎ. ಕೆ. ಎಂ. ಅಶ್ರಫ್ ಎಂಬ ನಾನು…” ಎಂದು ಕನ್ನಡದಲ್ಲಿ ಪ್ರಮಾಣ ವಚನ ಆರಂಭಿಸಿದಾಗ ಇಡೀ ಸದನದಲ್ಲಿ ಹರ್ಷೋದ್ಗಾರ ವ್ಯಕ್ತವಾಯಿತು. ಇವರ ಕನ್ನಡದ ಒಲವನ್ನು ಕಂಡು ಕೇರಳದ ಮುಖ್ಯಮಂತ್ರಿ, ಸಚಿವರು ಹಾಗೂ ಪ್ರತಿಪಕ್ಷ ನಾಯಕರು ಮೇಜು ತಟ್ಟುವ ಮೂಲಕ ತುಂಬು ಹೃದಯದ ಚಪ್ಪಾಳೆಯೊಂದಿಗೆ ಅಭಿನಂದನೆ ಸಲ್ಲಿಸಿದರು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಕನ್ನಡಿಗರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಮೇ 26ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಇಂದಿನಿಂದ 3 ದಿನ ಕರ್ನಾಟಕದಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ!

ಪ್ರಮಾಣ ವಚನ ಸ್ವೀಕಾರದ ನಂತರ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಶಾಸಕ ಅಶ್ರಫ್, “ಜನಪರ ಕಾಳಜಿ ಮತ್ತು ಜನರ ನಿರೀಕ್ಷೆಗಳ ಸಾಕ್ಷಾತ್ಕಾರದ ಸಂಕಲ್ಪದೊಂದಿಗೆ, ಭಾರತದ ಸಂವಿಧಾನದ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿದು, ಇಂದು 16ನೇ ಕೇರಳ ವಿಧಾನಸಭೆಯ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ, ಬೆಂಬಲ ಮತ್ತು ಪ್ರಾರ್ಥನೆಗಳು ಸದಾ ನನ್ನೊಂದಿಗೆ ಇರಲಿ” ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಮಾತೃಭಾಷೆ ಬ್ಯಾರಿಯಾಗಿದ್ದರೂ, ಗಡಿನಾಡಿನಲ್ಲಿ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿರುವ ಇವರಿಗೆ ಕನ್ನಡ ಭಾಷೆಯ ಮೇಲೆ ಅಪಾರ ಗೌರವ ಮತ್ತು ಒಲವಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು