ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ‘ಸೈನಿಕ’, ‘ಗಲಾಟೆ ಅಳಿಯಂದಿರು’, ‘ಕೋದಂಡರಾಮ’ ಹಾಗೂ ‘ತಂದೆಗೆ ತಕ್ಕ ಮಗ’ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿ ಕನ್ನಡಿಗರ ಮನಗೆದ್ದಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಸಾಕ್ಷಿ ಶಿವಾನಂದ್, ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಬಾಲಿವುಡ್‌ನಿಂದ ದಿಢೀರ್ ನಾಪತ್ತೆಯಾಗಿದ್ದರು. ತಮಗೆ ಸಿಕ್ಕ ಬಹುದೊಡ್ಡ ಬಾಲಿವುಡ್ ಚಿತ್ರದ ಅವಕಾಶವನ್ನೇ ಬಿಟ್ಟು ಅವರು ಪ್ರಾಣಭಯದಿಂದ ಮುಂಬೈನಿಂದ ಓಡಿಹೋಗಿದ್ದ ಕಹಿ ಘಟನೆ ಈಗ ಮತ್ತೆ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದಿದೆ.
ತೆಲುಗು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, ಬಳಿಕ ಬಾಲಿವುಡ್‌ನಲ್ಲಿ ‘ಜನಮ್ ಕುಂಡ್ಲಿ’, ‘ಪಾಪಾ ಕೆಹತೇ ಹೈ’ ಚಿತ್ರಗಳಲ್ಲಿ ನಟಿಸಿದ್ದ ಸಾಕ್ಷಿ ಅವರಿಗೆ 2000ರ ದಶಕದ ಆರಂಭದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ನಟನೆಯ ‘ತುಮ್’ (Tum) ಸಿನಿಮಾದಲ್ಲಿ ನಾಯಕಿಯಾಗುವ ಬಿಗ್ ಆಫರ್ ಸಿಕ್ಕಿತ್ತು. ಆದರೆ, ಸಿನಿಮಾ ಶೂಟಿಂಗ್ ಹಂತ ತಲುಪುವಷ್ಟರಲ್ಲಿ ಆ ಚಿತ್ರದ ನಿರ್ಮಾಪಕನಿಗೆ ಮುಂಬೈ ಭೂಗತ ಲೋಕದ (Underworld Mafia) ಜೊತೆ ನೇರ ಸಂಪರ್ಕ ಇರುವುದು ಸಾಕ್ಷಿ ಅವರಿಗೆ ಗೊತ್ತಾಗಿದೆ.
ಇದನ್ನೂ ಓದಿ; ಕಾರು ನಿಲ್ಲಿಸಿ ನದಿಗೆ ಜಿಗಿದ ತಮಿಳಿನ ಖ್ಯಾತ ಹಿರಿಯ ನಿರ್ಮಾಪಕ ಕೆ. ರಾಜನ್ ದುರಂತ ಅಂತ್ಯ!
ಮೊಬೈಲ್ ನಂಬರ್ ಬದಲಾಯಿಸಿ ನಾಪತ್ತೆಯಾಗಿದ್ದ ನಟಿ:
80 ಮತ್ತು 90ರ ದಶಕದಲ್ಲಿ ಬಾಲಿವುಡ್ ಮೇಲೆ ಮಾಫಿಯಾ ಜಗತ್ತಿನ ಕರಾಳ ಹಿಡಿತ ಎಷ್ಟಿತ್ತೆಂದರೆ, ಚಿತ್ರರಂಗದ ಹಲವರು ಅಂಡರ್‌ವರ್ಲ್ಡ್ ಬೆದರಿಕೆಗಳಿಗೆ ನಲುಗಿಹೋಗಿದ್ದರು. “ನಿರ್ಮಾಪಕನಿಗೆ ಮಾಫಿಯಾ ಕನೆಕ್ಷನ್ ಇರುವುದು ತಿಳಿಯುತ್ತಿದ್ದಂತೆ ನಾನು ಸಂಪೂರ್ಣವಾಗಿ ಜರ್ಜರಿತನಾಗಿದ್ದೆ. ಪ್ರಾಣಭಯದಿಂದ ತಕ್ಷಣವೇ ಆ ಚಿತ್ರದಿಂದ ಹೊರಬಂದು, ನನ್ನ ಮೊಬೈಲ್ ನಂಬರ್ ಬದಲಾಯಿಸಿ ಯಾರಿಗೂ ಸಿಗದಂತೆ ಅಡಗಿ ಕುಳಿತೆ. ಆ ಭಯಾನಕ ಅನುಭವ ನನ್ನ ಇಡೀ ಬಾಲಿವುಡ್ ಕರಿಯರ್ ಅನ್ನೇ ನಾಶಪಡಿಸಿತು,” ಎಂದು ಸಾಕ್ಷಿ ತಮ್ಮ ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಬಳಿಕ ಹಿಂದಿ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ಸಾಕ್ಷಿ, ದಕ್ಷಿಣ ಭಾರತಕ್ಕೆ ಮರಳಿ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾದರು. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಪರಮಶಿವ’ (2014) ಇವರ ಕೊನೆಯ ಪ್ರಮುಖ ಸಿನಿಮಾವಾಗಿತ್ತು. ಇತ್ತೀಚೆಗೆ ನಿರ್ದೇಶಕ ಡೇವಿಡ್ ಧವನ್ ಹಾಗೂ ಕರಣ್ ಜೋಹರ್ ಅವರಿಗೆ 90ರ ದಶಕದಲ್ಲಿ ಬಂದಿದ್ದ ಅಂಡರ್‌ವರ್ಲ್ಡ್ ಕೊಲೆ ಬೆದರಿಕೆಗಳ ವಿಚಾರಗಳು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಾಕ್ಷಿ ಶಿವಾನಂದ್ ಅವರ ಈ ಕರಾಳ ಹಳೆಯ ನೆನಪು ಮತ್ತೆ ವೈರಲ್ ಆಗಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


