ಬೆಂಗಳೂರು: ಪ್ರತಿ ಮನೆಯಲ್ಲೂ ಹೆಣ್ಣನ್ನು ಸಾಕ್ಷಾತ್ ಮಹಾಲಕ್ಷ್ಮಿಯ ರೂಪ ಎಂದು ಪೂಜಿಸಲಾಗುತ್ತದೆ. ಮನೆಯ ಅಭಿವೃದ್ಧಿ ಹಾಗೂ ಸುಖ-ಶಾಂತಿ ಆ ಮನೆಯ ಹೆಣ್ಣುಮಗಳ ನಡವಳಿಕೆಯ ಮೇಲೆ ಆಧಾರಿತವಾಗಿರುತ್ತದೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಶುಕ್ರವಾರದ ಸಂಜೆಯ ಸಮಯದಲ್ಲಿ ಮನೆಯ ಮಹಿಳೆಯರು ತಿಳಿಯದೋ ಅಥವಾ ಆಕಸ್ಮಿಕವಾಗಿಯೋ ಮಾಡುವ ಕೆಲವು ಕೆಲಸಗಳು ಧನಾತ್ಮಕ ಶಕ್ತಿಯನ್ನು ಹೊಡೆದೋಡಿಸಿ, ನಕಾರಾತ್ಮಕತೆಯನ್ನು ತರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಮತ್ತು ಹಿರಿಯರು ಹೇಳುತ್ತಾರೆ. ಶುಕ್ರವಾರದ ಸೂರ್ಯಾಸ್ತದ ನಂತರ ಹೆಣ್ಣುಮಕ್ಕಳು ಯಾವ ಕೆಲಸಗಳನ್ನು ಮಾಡಬಾರದು ಎಂಬ ಸಂಪೂರ್ಣ ವಿವರ ಇಲ್ಲಿದೆ.
ಸಂಜೆ ಸಮಯದಲ್ಲಿ ಮಲಗುವುದು (ನಿದ್ರೆ ಮಾಡುವುದು): ಶಾಸ್ತ್ರಗಳ ಪ್ರಕಾರ, ಶುಕ್ರವಾರದ ಸಂಜೆ ಗೋಧೂಳಿ ಮುಹೂರ್ತದಲ್ಲಿ ಯಾವುದೇ ಹೆಣ್ಣುಮಗಳು ಮನೆಯಲ್ಲಿ ಮಲಗಬಾರದು (ಅನಾರೋಗ್ಯದ ಸಂದರ್ಭ ಹೊರತುಪಡಿಸಿ). ಸಂಜೆ ವೇಳೆ ನಿದ್ರೆ ಮಾಡುವುದರಿಂದ ಮನೆಯಲ್ಲಿ ಜೇಷ್ಟಾದೇವಿ (ದಾರಿದ್ರ್ಯ) ಆವರಿಸುತ್ತದೆ ಮತ್ತು ಲಕ್ಷ್ಮೀ ದೇವಿಯು ಅಂತಹ ಮನೆಯಿಂದ ಹೊರನಡೆಯುತ್ತಾಳೆ ಎಂದು ಹೇಳಲಾಗುತ್ತದೆ. ಸಂಜೆ ವೇಳೆ ಜಾಗೃತವಾಗಿ ದೀಪ ಹಚ್ಚಿ ಪ್ರಾರ್ಥನೆ ಮಾಡಬೇಕು.
ಉಗುರು ಕಡೆಯುವುದು ಅಥವಾ ತಲೆ ಬಾಚುವುದು: ಸೂರ್ಯಾಸ್ತದ ನಂತರ ಮನೆಯ ಒಳಗಾಗಲಿ ಅಥವಾ ಹೊಸ್ತಿಲ ಮೇಲಾಗಲಿ ಕುಳಿತು ಉಗುರುಗಳನ್ನು ಕತ್ತರಿಸುವುದು ಅಥವಾ ತಲೆ ಬಾಚಿಕೊಂಡು ಕೂದಲುಗಳನ್ನು ಅಲ್ಲಲ್ಲಿ ಹಾಕುವುದು ಅಶುಭದ ಸಂಕೇತ. ಇದು ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಮತ್ತು ಕೌಟುಂಬಿಕ ಕಲಹಗಳಿಗೆ ನಾಂದಿ ಹಾಡುತ್ತದೆ.
ಮನೆ ಗುಡಿಸುವುದು ಮತ್ತು ಕಸ ಹೊರಹಾಕುವುದು: ಶುಕ್ರವಾರದ ಸಂಜೆ ದೀಪ ಹಚ್ಚುವ ಸಮಯದಲ್ಲಿ ಅಥವಾ ದೀಪ ಹಚ್ಚಿದ ತಕ್ಷಣ ಮನೆಯನ್ನು ಗುಡಿಸಿ ಕಸವನ್ನು ಮನೆಯಿಂದ ಹೊರಗೆ ಹಾಕಬಾರದು. ಕಸದ ಜೊತೆಗೆ ಮನೆಯಲ್ಲಿರುವ ಲಕ್ಷ್ಮಿಯ ಕೃಪೆಯೂ ಹೊರಟುಹೋಗುತ್ತದೆ ಎಂಬ ಬಲವಾದ ನಂಬಿಕೆಯಿದೆ. ಹಗಲಿನ ವೇಳೆಯಲ್ಲೇ ಸ್ವಚ್ಛತೆ ಮುಗಿಸಿ ಸಂಜೆ ಕೇವಲ ದೀಪಾರಾಧನೆಗೆ ಒತ್ತು ನೀಡಬೇಕು.
ಹುಳಿ ಪದಾರ್ಥಗಳ ಸೇವನೆ ಮತ್ತು ದಾನ: ಶುಕ್ರವಾರ ಸಂತೋಷಿ ಮಾತೆ ಅಥವಾ ಲಕ್ಷ್ಮಿಯ ವ್ರತ ಮಾಡುವವರು ಮಾತ್ರವಲ್ಲದೆ ಮನೆಯ ಹೆಣ್ಣುಮಕ್ಕಳು ಸಂಜೆ ವೇಳೆ ಅತಿಯಾದ ಹುಳಿ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಜೊತೆಗೆ, ಶುಕ್ರವಾರದ ಸಂಜೆ ಯಾರಿಗಾದರೂ ಹುಳಿ ವಸ್ತುಗಳು, ಮೊಸರು, ಉಪ್ಪು ಅಥವಾ ಸಕ್ಕರೆಯನ್ನು ಉಚಿತವಾಗಿ ದಾನ ಮಾಡಬಾರದು. ಇದು ಶುಕ್ರ ಗ್ರಹದ ಬಲವನ್ನು ಕ್ಷೀಣಿಸುತ್ತದೆ.
ಇದನ್ನೂ ಓದಿ: ಸಂಜೆ ಎಷ್ಟು ಗಂಟೆಯೊಳಗೆ ದೇವರಿಗೆ ದೀಪ ಹಚ್ಚಬೇಕು? ಶಾಸ್ತ್ರಗಳು ಹೇಳುವ ಸರಿಯಾದ ಸಮಯ ಹಾಗೂ ನಿಯಮ ಇಲ್ಲಿದೆ!
ಜಗಳವಾಡುವುದು ಮತ್ತು ಕಣ್ಣೀರು ಹಾಕುವುದು: ಮನೆಯಲ್ಲಿ ಹೆಣ್ಣುಮಗಳು ಸದಾ ಹಸನ್ಮುಖಿಯಾಗಿರಬೇಕು. ವಿಶೇಷವಾಗಿ ಶುಕ್ರವಾರದ ಸಂಜೆ ಮನೆಯಲ್ಲಿ ಕಿರುಚಾಡುವುದು, ಕೋಪ ಮಾಡಿಕೊಳ್ಳುವುದು ಅಥವಾ ಕಣ್ಣೀರು ಹಾಕುವುದರಿಂದ ಆ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಎಲ್ಲಿ ಶಾಂತಿ ಮತ್ತು ಪ್ರೀತಿ ಇರುತ್ತದೆಯೋ ಅಲ್ಲಿ ಮಾತ್ರ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ.
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


