ಸುಳ್ಯ: ರಾಜಕೀಯ ಕೇವಲ ಅಧಿಕಾರಕ್ಕಷ್ಟೇ ಸೀಮಿತವಾಗಿರದೆ ಸಮಾಜಸೇವೆಯೂ ಹೌದು ಎಂಬುದನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಚಾರ್ವಾಕ, ಕಾಣಿಯೂರು ಮತ್ತು ದೋಳ್ಪಾಡಿ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರು ಸಾಬೀತುಪಡಿಸಿದ್ದಾರೆ. ಬೂತ್ ಸಮಿತಿಯ ನೇತೃತ್ವದಲ್ಲಿ ಚಾರ್ವಾಕ ಗ್ರಾಮದ ಬಾಂತೋಡು ನಿವಾಸಿ ಪುಟ್ಟಣ್ಣ ಎಂಬ ಬಡ ಕುಟುಂಬಕ್ಕೆ ಸುಂದರವಾದ ನೂತನ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಇಡೀ ದೇಶಕ್ಕೆ ಕಾರ್ಯಕರ್ತರು ಮಾದರಿಯಾಗಿದ್ದಾರೆ ಎಂದು ಮಂಗಳೂರು (ದಕ್ಷಿಣ ಕನ್ನಡ) ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಶ್ಲಾಘಿಸಿದ್ದಾರೆ.
ಕುಟ್ಟುಪ್ಪಾಡಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಚಾರ್ವಾಕ, ಕಾಣಿಯೂರು ಹಾಗೂ ದೋಳ್ಪಾಡಿ ಶಕ್ತಿ ಕೇಂದ್ರದ ಬಿಜೆಪಿ ಬೂತ್ ಸಮಿತಿಗಳ ಆಶ್ರಯದಲ್ಲಿ ನಿರ್ಮಾಣಗೊಂಡ ನೂತನ ಮನೆಯ ಕೀಲಿ ಕೈಯನ್ನು ಫಲಾನುಭವಿ ಪುಟ್ಟಣ್ಣ ಅವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಮೂರು ಗ್ರಾಮಗಳ ಪ್ರಮುಖ ರಸ್ತೆಗಳ ಉದ್ಘಾಟನೆ ಮತ್ತು ಗುದ್ದಲಿಪೂಜೆ ಕಾರ್ಯಕ್ರಮವನ್ನು ದೋಳ್ಪಾಡಿಯಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಗ್ರಾಮಗಳ ರಸ್ತೆ ಉದ್ಘಾಟನೆ ಮತ್ತು ಹೊಸ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆಯನ್ನು ನೆರವೇರಿಸಿ ಶುಭಹಾರೈಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ವಹಿಸಿದ್ದರು. ಇನ್ನು ಈ ಇಡೀ ಭಗೀರಥ ಪ್ರಯತ್ನದ ಸಾರಥ್ಯ ವಹಿಸಿದ್ದ ಚಾರ್ವಾಕ ಸಿ.ಎ. ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಉದನಡ್ಕ ಸೇರಿದಂತೆ ಮನೆ ನಿರ್ಮಾಣಕ್ಕೆ ಉದಾರವಾಗಿ ಧನಸಹಾಯ ಮಾಡಿದ ದಾನಿಗಳನ್ನು, ಶಾಸಕರು ಹಾಗೂ ಜಿಲ್ಲಾಧ್ಯಕ್ಷರನ್ನು ಸಾರ್ವಜನಿಕವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಪ್ರಸನ್ನ ಮಾರ್ತ, ರಾಕೇಶ್ ರೈ ಕೆಡೆಂಜಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕಾಣಿಯೂರು ಗ್ರಾ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕೊಪ್ಪ, ಕುಟ್ಟುಪ್ಪಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ದೇಂತಾರು, ಮುಖಂಡರಾದ ಪ್ರಸನ್ನ ದರ್ಬೆ, ಹರೀಶ್ ಕಂಜಿಪಿಲಿ, ಇಂದಿರಾ ಬಿ.ಕೆ ಹಾಗೂ ದಿನೇಶ್ ಮಡು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗಣೇಶ್ ಉದನಡ್ಕ ಸ್ವಾಗತಿಸಿ, ಲೋಕಯ್ಯ ಪರವ ಧನ್ಯವಾದ ಸಮರ್ಪಿಸಿದರು. ಶಿವರಾಮ ರೈ ಮತ್ತು ಧನಂಜಯ ಕೇನಾಜೆ ಸಮಗ್ರ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


