ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರಾವಳಿ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರ ಆಶಾಕಿರಣವಾಗಿರುವ ಮಂಗಳೂರಿನ ಐತಿಹಾಸಿಕ ಸರ್ಕಾರಿ ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ಕೊನೆಗೂ ಮಹತ್ವದ ಭಾಗ್ಯ ದೊರೆತಿದೆ. ವೆನ್‌ಲಾಕ್ ಆಸ್ಪತ್ರೆಯನ್ನು ಇನ್ಮುಂದೆ ಅಧಿಕೃತವಾಗಿ ‘ಪ್ರಾದೇಶಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ (Regional Multi-Speciality Hospital) ಆಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ದೊಡ್ಡ ಪ್ರಕಟಣೆ ಹೊರಡಿಸಿದ್ದಾರೆ.
ಇನ್ಮುಂದೆ ಇದು ಸಾಮಾನ್ಯ ಆಸ್ಪತ್ರೆಯಲ್ಲ!:
ಮಂಗಳೂರಿನಲ್ಲಿ ನಡೆದ ಜಿಲ್ಲಾಸ್ಪತ್ರೆಯ ವಿವಿಧ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಈ ಮಹತ್ವದ ನಿರ್ಧಾರವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. “ವೆನ್‌ಲಾಕ್ ಆಸ್ಪತ್ರೆಯನ್ನು ಕೇವಲ ಸಾಮಾನ್ಯ ಜಿಲ್ಲಾ ಆಸ್ಪತ್ರೆಯಾಗಿ ನೋಡುವ ದಿನಗಳು ಮುಗಿದಿವೆ. ನಾವು ಈಗಾಗಲೇ ಈ ಆಸ್ಪತ್ರೆಯನ್ನು ಪ್ರಾದೇಶಿಕ ಮಲ್ಟಿ ಸ್ಪೆಷಾಲಿಟಿ ಕೇಂದ್ರವಾಗಿ ಪರಿವರ್ತಿಸಲು ಕಡ್ಡಾಯ ತೀರ್ಮಾನ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಈ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಮತ್ತು ಆದೇಶ ಹೊರಬೀಳಲಿದೆ” ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ‘ಎಬೋಲಾ’ ಮಹಾಮಾರಿ ಕುರಿತು ಮಾಜಿ ಸಿಡಿಸಿ (CDC) ಮುಖ್ಯಸ್ಥರ ಗಂಭೀರ ಎಚ್ಚರಿಕೆ
ಉಚಿತವಾಗಿ ಸಿಗಲಿದೆ ಹೈಟೆಕ್ ಚಿಕಿತ್ಸೆಗಳು:
ಈಗಾಗಲೇ ವೆನ್‌ಲಾಕ್ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸರಿಸಮಾನವಾಗಿ ಅತ್ಯಂತ ದುಬಾರಿ ಚಿಕಿತ್ಸೆಗಳಾದ ಆ್ಯಂಜಿಯೋಪ್ಲಾಸ್ಟಿ (Angioplasty), ಕ್ಯಾನ್ಸರ್ ಪೀಡಿತರಿಗೆ ಕಿಮೋಥೆರಪಿ (Chemotherapy), ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ (Dialysis) ಹಾಗೂ ಜಟಿಲವಾದ ನ್ಯೂರೋ ಸರ್ಜರಿಗಳನ್ನು (Neuro Surgery) ಯಶಸ್ವಿಯಾಗಿ ಮಾಡಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ವಿಭಾಗದ ಎಲ್ಲಾ ಚಿಕಿತ್ಸೆಗಳು ಒಂದೇ ಸೂರಿನಡಿ ಸಿಗುತ್ತಿರುವುದರಿಂದ, ಇದು ಈಗಾಗಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ವಿವರಿಸಿದರು. ಸರ್ಕಾರದ ಈ ನಿರ್ಧಾರದಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಲಕ್ಷಾಂತರ ಬಡ ರೋಗಿಗಳಿಗೆ ಉನ್ನತ ಗುಣಮಟ್ಟದ ವೈದ್ಯಕೀಯ ಸೇವೆ ಉಚಿತವಾಗಿ ಹಾಗೂ ಸಕಾಲದಲ್ಲಿ ಸಿಗುವಂತಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


